ಸಿದ್ಧಗಂಗಾ ಶ್ರೀಗಳಿಗೆ ಇಂದು 106ನೇ ಹ್ಯಾಪಿ ಬರ್ತ್ ಡೇ
ತುಮಕೂರು, ಏ.1: 'ನಡೆದಾಡುವ ದೇವರು' ಎಂದೇ ಜನಜನಿತರಾಗಿರುವ ಸಿದ್ಧಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಂದು 106ನೇ ಹ್ಯಾಪಿ ಬರ್ತ್ ಡೇ. ರಾಜ್ಯದ ಅನೇಕ ಭಾಗಗಳಿಂದಲೂ ಅಪಾರ ಭಕ್ತ ಸಮೂಹ ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ. ಮಠದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. 106 ವಸಂತ ಕಂಡಿರುವ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಭಕ್ತ ಸಮೂಹ ಕಾದುಕುಳಿತಿದೆ.

ಹಳೆಯ ಮಠದಲ್ಲಿ ಬೆಳಗಿನ ಜಾವ 4 ಗಂಟೆಗೆ ಶಿವಪೂಜೆ ಮುಗಿಸಿಕೊಂಡು ಹೊರ ಬರುವ ಶಿವಕುಮಾರ ಸ್ವಾಮೀಜಿಗಳಿಗೆ ವಿವಿಧ ಮಂಗಳವಾದ್ಯ ಹಾಗೂ 106 ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಮಠದ ಆವರಣದಲ್ಲಿ ನಿರ್ಮಿಸಿರುವ ವೇದಿಕೆಗೆ ಅಪಾರ ಭಕ್ತ ಸಮೂಹದ ಜಯಘೋಷದ ನಡುವೆ ಕರೆ ತರಲಾಗುತ್ತದೆ. ಆನಂತರ 50ಕ್ಕೂ ಹೆಚ್ಚು ಹಿರಿಯರು ಮಠದ ಎದುರಿನ ಮಂಟಪದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀಗಳ ಪಾದಪೂಜೆ ಮಾಡಲಿದ್ದಾರೆ.
ಸಚಿವರಾದ ವಿ ಸೋಮಣ್ಣ ದಂಪತಿ, ಬಿಜೆಪಿ ಹಿರಿಯ ನಾಯಕ ರಾಮಚಂದ್ರೇಗೌಡ ಸೇರಿದಂತೆ ಅನೇಕ ಭಕ್ತಾದಿಗಳು ಈಗಾಗಲೇ ತುಮಕೂರಿಗೆ ಆಗಮಿಸಿದ್ದು, ಶ್ರೀಗಳ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಸಹ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರೂ ಶ್ರೀಗಳ ಆಶೀರ್ವಾದ ಪಡೆದರು.
ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀಗಳು ಸನ್ಯಾಸ ದೀಕ್ಷೆ ಸ್ವೀಕರಿಸಿ 83 ವರ್ಷಗಳಾಗಿವೆ. ಶಿಕ್ಷಣದಲ್ಲಿ ಶ್ರೀಗಳ ಸಾಧನೆ ಅನನ್ಯ. ಸಿದ್ಧಗಂಗಾ ಎಜುಕೇಷನ್ ಸೊಸೈಟಿ ಎಂಬ ಮಹಾ ಆಲದ ಮರದಡಿ 124 ಶಾಲೆ, ಕಾಲೇಜುಗಳನ್ನು ನಡೆಯುತ್ತಿವೆ. ಶ್ರೀಮಠದಲ್ಲಿ 10,000ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.












Click it and Unblock the Notifications