ಕಾಂಗ್ರೆಸ್ ಕೂಡ ಬಿಜೆಪಿ ಹಾದಿ ಹಿಡಿದಿದೆಯೆ?

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಸಂದೇಹ ಕಾಡದೆ ಇರದು. ಹೈಕಮಾಂಡ್ ಕಂಡರೆ ಹಿಂದಿದ್ದ ಹೆದರಿಕೆ ಮತ್ತು ಭಕ್ತಿಭಾವ ಇಂದಿನ ನಾಯಕರಿಗೆ ಇಲ್ಲದಾಗಿರುವುದು ಮತ್ತು ದೆಹಲಿ ನಾಯಕರ ಅಣತಿಯಂತೆ ರಾಜ್ಯ ನಾಯಕರು ನಡೆದುಕೊಳ್ಳದಿರುವುದು ಕಾಂಗ್ರೆಸ್ಸಿಗೆ ಅಲ್ಪ ಹಿನ್ನಡೆ ಆಗಿರುವುದು ನಿಜ.
ಹಾಗೆ ನೋಡಿದರೆ, ಭಾರತೀಯ ಜನತಾ ಪಕ್ಷ, ಕೋಡಿಮಠ ಸ್ವಾಮೀಜಿಗಳು ಹೇಳಿದಂತೆ ಮೂರು ಹೋಳಾಗಿ ಚೆದುರಿಹೋಗಿರುವುದು ಕಾಂಗ್ರೆಸ್ಸಿಗೆ ವರವಾಗಿ ಪರಿಣಮಿಸಿದೆ. ಬಿಜೆಪಿಯ ಲಂಗುಲಗಾಮಿಲ್ಲದ ಆಡಳಿತದಿಂದಾಗಿ ರಾಜ್ಯದ ಜನರು ಸಹಜವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ಸಿನತ್ತ ನೋಡುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಮಾರ್ಚ್ 7ರಂದು ನಡೆದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಯಶಸ್ಸು ಕಂಡಿದೆ. ಚುನಾವಣೆ ಸಮೀಕ್ಷೆಗಳು ಕೂಡ ಈ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಪಕ್ಷಗಳನ್ನು ಹಿಂದಿಕ್ಕುವುದು ಖಚಿತ ಎಂದು ಭವಿಷ್ಯ ನುಡಿದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಅವರು ಪರೋಕ್ಷವಾಗಿ ಕಾಂಗ್ರೆಸ್ಸಿನ ಬೆನ್ನಹಿಂದೆ ನಿಂತಿದ್ದಾರೆ.
ಈ ಉತ್ತಮ ಹವೆಯ ನಡುವೆಯೂ ಕಾಂಗ್ರೆಸ್ ಅನೇಕ ಅಡೆತಡೆಗಳನ್ನು ತಾನಾಗಿಯೇ ಸೃಷ್ಟಿಸಿಕೊಂಡಿದೆ. ಬಿಜೆಪಿಯಿಂದ ಬೇಸತ್ತು ಗುಳೆಯೆದ್ದು ಹೊರಟ ಅನೇಕ ಶಾಸಕರು ಕಾಂಗ್ರೆಸ್ ಮುಂದೆ ಕೈಯೊಡ್ಡಿದ್ದು ವರ ಮತ್ತು ಶಾಪವಾಗಿ ಪರಿಣಮಿಸಿದೆ. ಈ ಬಾರಿ ಬಹುಮತ ಬಂದರೆ ಮಿನಿಸ್ಟರ್ ಗಿರಿ ಗ್ಯಾರಂಟಿ ಎಂದು ಮೀಸೆ ತಿರುವುದ್ದಿದ್ದವರಿಗೆ ಅನ್ಯ ಪಕ್ಷದಿಂದ ಬರುತ್ತಿರುವ ರಾಜಕಾರಣಿಗಳು ಬ್ರೇಕ್ ಹಾಕಲು ಯತ್ನಿಸುತ್ತಿದ್ದಾರೆ.
ಗೂಳಿಹಟ್ಟಿ ಶೇಖರ್ ಹೊರತುಪಡಿಸಿದರೆ ಉಳಿದ ನಾಲ್ವರು (ಪಿ.ಎಂ.ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಸುಧಾಕರ್, ಶಿವರಾಜ್ ತಂಗಡಗಿ) ಪಕ್ಷೇತರ ಶಾಸಕರೊಂದಿಗೆ ಕಾಂಗ್ರೆಸ್ ಹಸ್ತಲಾಘವ ಮಾಡಿಕೊಂಡಿರುವುದು ಒಂದೆಡೆಯಾದರೆ, ಮೊದಲು ಕಾಂಗ್ರೆಸ್ಸಿನಲ್ಲಿದ್ದೂ 'ಆಪರೇಷನ್ ಕಮಲ'ದ ಉರುಳಿಗೆ ಕೊರಳೊಡ್ಡಿದವರು ಮತ್ತೆ ಟಿಕೆಟ್ ಆಕಾಂಕ್ಷಿಗಳಾಗಿ ಪಕ್ಷಕ್ಕೆ ಮರಳಿ ಬರುತ್ತಿರುವುದು ನುಂಗಲಾಗದ ಬಿಸಿ ತುಪ್ಪವಾಗಿದೆ. ಏನೇ ಆದ್ರೂ ಸರಿ ಅಂಥವರಿಗೆ ಟಿಕೆಟ್ ಕೊಡಬಾರದು ಎಂಬ ಮಾತು ಕೇಳಿಬಂದಿದೆ.
ಈ ತೊಂದರೆಗಳು ಸಾಲದೆಂಬಂತೆ, ಹಿರಿಯ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ಈ ಚಾನ್ಸು ಬಿಟ್ಟರೆ ಮತ್ತೆ ಅವಕಾಶ ಸಿಗದು ಎಂದು ಲುಂಗಿ ಗಟ್ಟಿಮಾಡಿಕೊಂಡಿರುವ ಸಿದ್ದರಾಮಯ್ಯ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ನಾನು ಹೇಳಿದಂಗೆ ಆಗದಿದ್ದರೆ ಮುಂದೇನಾಗುತ್ತದೋ ನೀವೇ ನೋಡುತ್ತೀರಿ ಎಂದು ಸಿದ್ದರಾಮಯ್ಯ ತೊಡೆತಟ್ಟಿರುವುದು ಕಾಂಗ್ರೆಸ್ ಹೈಕಮಾಂಡನ್ನು ಅಡಕತ್ತರಿಯಲ್ಲಿ ಸಿಕ್ಕಿಸಿದೆ.
ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿಲ್ಲ ಎಂದು ಕೆಂಗಣ್ಣು ಬೀರಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ನಾಯಕರಿಗೆ ಲಗಾಮು ಹಾಕದಿದ್ದರೆ, ಭವಿಷ್ಯಕಾರರ, ಸಮೀಕ್ಷೆಗಾರರ, ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನೆಲ್ಲ ಕಾಂಗ್ರೆಸ್ ತಲೆಕೆಳಗು ಮಾಡುವುದು ಖಚಿತ. ಆದರೆ, ಅನ್ಯಪಕ್ಷದಿಂದಲೇ ಕರೆಸಿಕೊಂಡಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸೋನಿಯಾ ಗಾಂಧಿಗೆ ಸಾಧ್ಯವೆ?
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications