ಮಗನಿಗೆ ಟಿಕೆಟ್ ಕೊಡಿ : ಅಟ್ಟೂರ್ ಹೊಸ ವರಸೆ

ಬುಧವಾರ ಕೆಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ ಬಸವರಾಜ ಅಟ್ಟೂರ್, ಮುಂದಿನ ಚುನಾವಣೆಗೆ ಬಸವ ಕಲ್ಯಾಣ ಕ್ಷೇತ್ರದಿಂದ ತಮ್ಮ ಪುತ್ರ ಲಿಂಗರಾಜ್ ಪಾಟೀಲ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರಿದ್ದ ಅಟ್ಟೂರ್, ಮಂಗಳವಾರ ಬಸವಕಲ್ಯಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಪಘಾತದಿಂದ ಗಾಯಗೊಂಡಿರುವ ತಾವು ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ತಮ್ಮ ಕುಟುಂಬದ ಸದಸ್ಯರು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಡಿ.28ರಂದು ಬಸವ ಕಲ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಬಸವರಾಜ ಅಟ್ಟೂರ್ ಕ್ಷೇತ್ರದ ಮುಂದಿನ ಕೆಜೆಪಿ ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಿಸಿದ್ದರು. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ಅಟ್ಟೂರ್, ಬುಧವಾರ ಅಚ್ಚರಿಯ ಬೆಳವಣಿಗೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಕಳೆದ ಎರಡು ದಿನದಲ್ಲಿ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದರೆ, ಇತ್ತ ಶಾಸಕರು ಪಕ್ಷ ತೊರೆಯುತ್ತಿದ್ದಾರೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಬುಧವಾರ ಬೆಳಗ್ಗೆ ಚಂದ್ರಕಾಂತ ಬೆಲ್ಲದ್ ಘೋಷಿಸಿದ್ದರು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ಬಿಜೆಪಿಯೇ ಉಚ್ಚಾಟಿಸಿದೆ.
ಇನ್ನೆರಡು ದಿನಗಳಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಕೃಷ್ಣ ಬಿಜೆಪಿ ತೊರೆಯುವುದು ಖಚಿತವಾಗಿದೆ. ಮಾ.29ರಂದು ಅಥವ 30ರಂದು ಸಚಿವರಾದ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಪಕ್ಷ ತೊರೆಯಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ನೇಮಕವಾದರೂ ಶಾಸಕರ ವಲಸೆ ತಪ್ಪಿಸಲು ಸಾಧ್ಯವಾಗಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಸೇರಿದ್ದ ರಾಜ್ಯ ಚುನಾವಣಾ ಸಮಿತಿಯ ಸಭೆಯನ್ನು ಮುಂದೂಡಲಾಗಿದೆ. ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿಯಲ್ಲಿ ಯಾರು ಉಳಿಯಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಕೆಜೆಪಿ, ಕಾಂಗ್ರೆಸ್ ಸೇರುವವರು ಪಕ್ಷ ತೊರೆದರೆ ನಂತರ ಬಿಜೆಪಿಯ ನಿಜವಾದ ಶಕ್ತಿ ಏನೆಂದು ತಿಳಿದು ಬರುತ್ತದೆ. ಯಡಿಯೂರಪ್ಪ ಹೇಳಿದಂತೆ ಹೋಳಿ ನಂತರ ರಾಜಕೀಯ ಧೃವೀಕರಣವಾಗುತ್ತದೆಯೇ? ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications