ಟಿಕೆಟ್ ದೊರೆಯದಿದ್ದರೆ ಪಕ್ಷೇತರನಾಗಿ ಸ್ಪರ್ಧೆ : ಬೇಳೂರು

ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸುತ್ತಾ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಬೇಳೂರು ಗೋಪಾಲಕೃಷ್ಣ, ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಬಿಜೆಪಿ ಬಿಡುವುದು ಖಚಿತವಾಗಿದ್ದು, ಕಾಂಗ್ರೆಸ್ ಸೇರಲು ಸಿದ್ದನಾಗಿದ್ದೇನೆ. ಆದರೆ, ಟಿಕೆಟ್ ದೊರೆಯುವ ಬಗ್ಗೆ ಭರವಸೆ ದೊರಕಿಲ್ಲ ಎಂದರು.
ಕಾಂಗ್ರೆಸ ಪಕ್ಷದಿಂದ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು. ಇನ್ನೆರಡು ದಿನದಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಬೇಳೂರು ಕಾಂಗ್ರೆಸ್ ಸೇರ್ಪಡೆಗೆ ಸಾಗರ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅಡ್ಡಿಯಾಗಿದ್ದಾರೆ. ಕಾಂಗ್ರೆಸ್ ಸೇರುವುದಾಗಿ ಬೇಳೂರು ಘೋಷಿಸಿದ ತಕ್ಷಣ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದ ಕಾಗೋಡು ಸಾಗರ ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧಿಸಲು ಮುಂದಾಗಿದ್ದಾರೆ.
ಬೇಳೂರು ಪಕ್ಷ ಸೇರಿದರೆ ಟಿಕೆಟ್ ಗಾಗಿ ಪೈಪೋಟಿ ಆರಂಭವಾಗಲಿದೆ. ಆದ್ದರಿಂದ ಕಾಗೋಡು ಬೇಳೂರು ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಭಿಪ್ರಾಯದಂತೆ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಗೋಡು ತಿಮ್ಮಪ್ಪ ಅವರಿಗೆ ಸದ್ಯ 83 ವರ್ಷ ವಯಸ್ಸು. ಆದ್ದರಿಂದ ಟಿಕೆಟ್ ದೊರೆಯುವುದು ಖಾತ್ರಿಯಾಗಿಲ್ಲ.
ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಬೇಳೂರು ಗೋಪಾಲಕೃಷ್ಣ ಟಿಕೆಟ್ ಪಡೆಯಲು ಸತತ ಪ್ರಯತ್ನ ನಡೆಸಿದ್ದಾರೆ. ಬೇಳೂರು ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಈಗಾಗಲೇ ಪ್ರಕಟಿಸಿದೆ. ಇತ್ತ ಬಿಜೆಪಿಯೂ ಇಲ್ಲ. ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲ ಎಂಬ ಸ್ಥಿತಿಯಲ್ಲಿರುವ ಬೇಳೂರು ಪಕ್ಷೇತರರಾಗಿ ಸ್ಪರ್ಧಿಸುವಾಗಿ ಹೇಳಿದ್ದಾರೆ.
ಬೇಳೂರು ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿದೆಯೋ ಇಲ್ಲವೋ ಎಂಬುದು ಎರಡು ದಿನಗಳಲ್ಲಿ ನಿರ್ಧಾರವಾಗಲಿದೆ. ನಂತರ ಬೇಳೂರು ಅವರ ಪಕ್ಷೇತರರಾಗಿ ಸ್ಪರ್ಧಿಸಬೇಕೋ ಎಂದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications