E-Khata: ತಪ್ಪಾಗಿ ಸಲ್ಲಿಸಿದ ಇ-ಖಾತಾ ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಆಸ್ತಿದಾರರಿಗೆ ಅವಕಾಶ: ಮುನೀಶ್ ಮೌದ್ಗಿಲ್
E-Khata: ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಇ ಖಾತಾ ವಿಚಾರದಲ್ಲಿ ಗುಡ್‌ನ್ಯೂಸ್ ಕೊಡಲಾಗಿದೆ. ತಪ್ಪಾಗಿ ಸಲ್ಲಿಸಲಾದ ಇ-ಖಾತಾ ಅರ್ಜಿಗಳನ್ನು ಆಸ್ತಿದಾರರು ಈಗ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.
ಬೆಂಗಳೂರು ನಗರದ ಸಾರ್ವಜನಿಕರ ಸೇವೆಗಳ ಸುಧಾರಣೆಯನ್ನು ಉದ್ದೇಶಿಸಿ ಇ-ಖಾತಾ ವ್ಯವಸ್ಥೆಯಲ್ಲಿ ಮಾಡಲಾದ ಇತ್ತೀಚಿನ ಪರಿಷ್ಕರಣೆಗಳು ಮತ್ತು ಅಭಿವೃದ್ಧಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಟೌನ್ ಹಾಲ್‌ನಲ್ಲಿ ಬುಧವಾರ ವಿಶೇಷ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು. 13.05 ಲಕ್ಷ ಆಸ್ತಿ ಮಾಲೀಕರಿಗೆ ಆನ್‌ಲೈನ್ ಇ-ಖಾತಾ ಸೇವೆ ಸಕ್ರಿಯ ಆಗಿರುವ ಬಗ್ಗೆ ಅವರು ಅಪ್ಡೇಟ್ ಕೊಟ್ಟಿದ್ದಾರೆ.

ನಗರದಲ್ಲಿ ಸುಮಾರು 13.05 ಲಕ್ಷ SAS ಐಡಿ ಆಧಾರಿತ ಆಸ್ತಿಗಳೊಂದಿಗೆ ಸಂಬಂಧಿಸಿದ ನಾಗರಿಕರು ಈಗ ಸುಲಭವಾಗಿ ತಮ್ಮ ಇ-ಖಾತಾ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು. ಇದರಿಂದ ಹಸ್ತಚಾಲಿತ ನಡೆಯುವ ಪ್ರಕ್ರಿಯೆಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಅರ್ಜಿಗಳ ಪ್ರಕ್ರಿಯೆ ಮತ್ತು ಅನುಮೋದನಾ ವಿಧಾನಗಳಲ್ಲಿ ಮಾಡಲಾದ ಪರಿಷ್ಕರಣೆಗಳ ಕುರಿತು ಅಧಿಕಾರಿಗಳಿಗೆ ಸಮಗ್ರವಾಗಿ ಮಾರ್ಗದರ್ಶನ ನೀಡಲಾಯಿತು, ಇದರಿಂದ ಇಲಾಖೆಯಲ್ಲಿ ಹೆಚ್ಚು ದಕ್ಷತೆ ಮತ್ತು ಏಕೀಕೃತ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಆಸ್ತಿ ವಿವರ ತಿದ್ದುಪಡಿ - ತಪ್ಪಾದ ಅರ್ಜಿಗಳನ್ನು ವಾಪಸ್ ಪಡೆಯಲು ಅವಕಾಶ
ಇನ್ನು ಬೆಂಗಳೂರಿನ ಆಸ್ತಿದಾರರಿಗೆ ಇ ಖಾತಾ ಅರ್ಜಿ ದೋಷದ ವಿಚಾರದಲ್ಲಿ ಗುಡ್‌ನ್ಯೂಸ್ ಕೊಡಲಾಗಿದೆ. ಈಗ ಸಾರ್ವಜನಿಕರು ಕೆಲವು ಆಸ್ತಿ ವಿವರಗಳನ್ನು ಸ್ವಯಂ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಇದರ ಜೊತೆಗೆ, ತಪ್ಪಾಗಿ ಸಲ್ಲಿಸಿದ ಇ-ಖಾತಾ ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರಕ್ರಿಯೆಯಲ್ಲಿನ ಅಡಚಣೆಗಳು ಕಡಿಮೆಯಾಗುತ್ತವೆ ಮತ್ತು ಹೆಚ್ಚಿನ ಸೌಕರ್ಯ ದೊರೆಯುತ್ತದೆ ಎಂದು ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
"ವಹಿವಾಟು/ನೋಂದಣಿಗೆ ಸಿದ್ಧ" ಎಂದು ಗುರುತಿಸಲಾದ ಆಸ್ತಿಗಳಿಗೆ ಈಗ ವ್ಯವಸ್ಥೆಯಲ್ಲಿ ಸ್ವಯಂ ಮಾನ್ಯತೆ ಮತ್ತು ಅನುಮೋದನೆ ಸೌಲಭ್ಯವನ್ನು ಪರಿಚಯಿಸಲಾಗಿದೆ. ಇದಕ್ಕಾಗಿ ಖುಣಭಾರ ಪ್ರಮಾಣ ಪತ್ರ(EC) ಅಪ್‌ಲೋಡ್ ಮತ್ತು ಪರಿಶೀಲನೆ ಆಧಾರವಾಗಿರುತ್ತದೆ. ಇದರಿಂದ ಆಸ್ತಿ ವಹಿವಾಟು ಪ್ರಕ್ರಿಯೆ ವೇಗಗೊಳ್ಳುತ್ತದೆ. ಇ-ಖಾತಾ ಅರ್ಜಿ ಮತ್ತು ಅನುಮೋದನಾ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಡಿಜಿಟಲ್ ಆಡಳಿತ, ದಕ್ಷತೆ ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕೆ ಆಡಳಿತ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇನ್ನು ಇಂದು ನಡೆದ ಕಾರ್ಯಾಗಾರದಲ್ಲಿ 5 ನಗರ ಪಾಲಿಕೆಗಳ ಎಲ್ಲಾ ವಲಯಗಳ ಜಂಟಿ ಆಯುಕ್ತರು, ಕಂದಾಯ ಇಲಾಖೆಯ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಇದ್ದರು.













Click it and Unblock the Notifications