ಗೃಹಿಣಿಯರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೇ? ಯಾವಾಗ ಕಡ್ಡಾಯ? ಇಲ್ಲಿದೆ ಸಂಪೂರ್ಣ ಮಾಹಿತಿ

ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರಿಗೆ ಆದಾಯ ತೆರಿಗೆ (ITR) ಸಲ್ಲಿಸುವ ಅಗತ್ಯವಿಲ್ಲ ಎಂಬುದು ಹಲವರ ನಂಬಿಕೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಗೃಹಿಣಿಯರೂ ಕೆಲವು ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ, ಅವರು ಕೂಡ ಆದಾಯ ತೆರಿಗೆ ನಿಯಮಗಳ ವ್ಯಾಪ್ತಿಗೆ ಬರುತ್ತಾರೆ. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ, ಬಾಡಿಗೆ ಆದಾಯ, ಹೂಡಿಕೆಗಳಿಂದ ಬರುವ ಲಾಭ ಅಥವಾ ಇತರ ಆದಾಯಗಳಿದ್ದರೆ, ಕೆಲವು ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಬಹುದು.

ಯಾವಾಗ ಕಡ್ಡಾಯ?

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿರುವ ಮೂಲ ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಇದ್ದರೆ ಸಾಮಾನ್ಯವಾಗಿ ಐಟಿಆರ್ ಸಲ್ಲಿಸುವ ಅಗತ್ಯವಿರುವುದಿಲ್ಲ.

ಹೊಸ ತೆರಿಗೆ ಪದ್ಧತಿ (New Tax Regime)

- ಗೃಹಿಣಿಗೆ ವಾರ್ಷಿಕ ₹4 ಲಕ್ಷದವರೆಗೆ ಆದಾಯ ಬರುತ್ತಿದ್ದರೆ, ತೆರಿಗೆ ಇಲ್ಲ. ರಿಟರ್ನ್‌ ಸಲ್ಲಿಸಬೇಕಿಲ್ಲ.
- ಆದಾಯ ₹4 ಲಕ್ಷ ಮೀರಿದರೆ ಐಟಿಆರ್ ಸಲ್ಲಿಸುವ ಅಗತ್ಯ ಉಂಟಾಗಬಹುದು.

Do Homemakers Need to File ITR

ಹಳೆಯ ತೆರಿಗೆ ಪದ್ಧತಿ (Old Tax Regime)

- 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗೃಹಿಣಿಯರಿಗೆ ₹2.5 ಲಕ್ಷದವರೆಗೆ ತೆರಿಗೆ ಇಲ್ಲ.
- 60ರಿಂದ 80 ವರ್ಷದೊಳಗಿನ ಹಿರಿಯ ನಾಗರಿಕರಿಗೆ ₹3 ಲಕ್ಷದವರೆಗೆ ತೆರಿಗೆ ಇಲ್ಲ.
- 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ನಾಗರಿಕರಿಗೆ ₹5 ಲಕ್ಷದವರೆಗೆ ತೆರಿಗೆ ಇಲ್ಲ.

ಹೀಗಾಗಿ, ಗೃಹಿಣಿಯ ಒಟ್ಟು ವಾರ್ಷಿಕ ಆದಾಯ ಈ ಮಿತಿಗಳನ್ನು ಮೀರಿದರೆ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗುತ್ತದೆ.

ನಿಮ್ಮ ತಂದೆಗೆ ಮನೆ ಬಾಡಿಗೆ ಪಾವತಿಸಿ ಕಂಪನಿಯ HRA ಪಡೆಯಬಹುದಾ? ತೆರಿಗೆ ಉಳಿಸಬಹುದಾ?
ನಿಮ್ಮ ತಂದೆಗೆ ಮನೆ ಬಾಡಿಗೆ ಪಾವತಿಸಿ ಕಂಪನಿಯ HRA ಪಡೆಯಬಹುದಾ? ತೆರಿಗೆ ಉಳಿಸಬಹುದಾ?

ಗೃಹಿಣಿಯರ ಆದಾಯ ಮೂಲಗಳು

1. ಗಂಡ ನೀಡುವ ಮನೆ ಖರ್ಚಿನ ಹಣ

ಪತಿ ಮನೆ ನಿರ್ವಹಣೆಗಾಗಿ ಪತ್ನಿಗೆ ನೀಡುವ ಹಣವನ್ನು ಆದಾಯವೆಂದು ಪರಿಗಣಿಸುವುದಿಲ್ಲ. ಅದು ನೇರವಾಗಿ ಪತ್ನಿಯ ಬ್ಯಾಂಕ್ ಖಾತೆಗೆ ಜಮೆಯಾಗಿದ್ದರೂ ತೆರಿಗೆ ವಿಧಿಸಲಾಗುವುದಿಲ್ಲ.

2. ಫಿಕ್ಸ್ಡ್ ಡೆಪಾಸಿಟ್ (FD) ಬಡ್ಡಿ

ಗೃಹಿಣಿಯ ಹೆಸರಿನಲ್ಲಿರುವ ಎಫ್‌ಡಿಗಳಿಂದ ಬರುವ ಬಡ್ಡಿ ಆದಾಯವಾಗಿ ಪರಿಗಣಿಸಲಾಗುತ್ತದೆ. ಈ ಆದಾಯ ತೆರಿಗೆ ಮಿತಿಯನ್ನು ಮೀರಿದರೆ ತೆರಿಗೆ ಪಾವತಿಸಬೇಕಾಗಬಹುದು.

3. ಬಾಡಿಗೆ ಆದಾಯ

ಮನೆಯಿಂದ ಅಥವಾ ಇತರ ಆಸ್ತಿಯಿಂದ ಬಾಡಿಗೆ ಬರುತ್ತಿದ್ದರೆ ಅದು ತೆರಿಗೆಗೆ ಒಳಪಡುವ ಆದಾಯವಾಗುತ್ತದೆ. ಈ ಆದಾಯ ಗಂಡನ ಹೆಸರಿನಲ್ಲಿದ್ದರೆ ತೆರಿಗೆ ರಿಟರ್ನ್‌ ಅಗತ್ಯವಿಲ್ಲ. ಪತ್ನಿಯ ಹೆಸರಿನಲ್ಲಿದ್ದರೆ ರಿಟರ್ನ್‌ ಅಗತ್ಯ.

4. ಹೂಡಿಕೆಗಳಿಂದ ಬರುವ ಲಾಭ

ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ಇತರ ಹೂಡಿಕೆಗಳಿಂದ ಬರುವ ಲಾಭವೂ ಆದಾಯದ ಭಾಗವಾಗುತ್ತದೆ. ಇದನ್ನು ಪ್ಯಾನ್‌, ಡಿಮ್ಯಾಟ್‌ ಅಕೌಂಟ್‌ ಮೂಲಕ ಪತ್ತೆ ಹಚ್ಬಹುದು.

5. ಉಡುಗೊರೆ (Gift)

ಸಂಬಂಧಿಕರಿಂದ ಬಂದ ಉಡುಗೊರೆಗಳಿಗೆ ತೆರಿಗೆ ಇಲ್ಲ. ಆದರೆ ಸಂಬಂಧಿಕರಲ್ಲದ ವ್ಯಕ್ತಿಗಳಿಂದ ಒಂದು ಹಣಕಾಸು ವರ್ಷದಲ್ಲಿ ₹50,000ಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಬಂದರೆ ಅದು ತೆರಿಗೆಗೆ ಒಳಪಡಬಹುದು.

ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಯ್ತಾ? ಗಾಬರಿಯಾಗಬೇಡಿ, ಹೀಗ್ ಮಾಡಿ
ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಯ್ತಾ? ಗಾಬರಿಯಾಗಬೇಡಿ, ಹೀಗ್ ಮಾಡಿ

ಪತಿಯ ಹಣವನ್ನು ಪತ್ನಿಯ ಹೆಸರಿನಲ್ಲಿ ಹೂಡಿದರೆ?

ಪತಿ ತನ್ನ ಹಣವನ್ನು ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡಿದರೆ, ಮೂಲ ಹೂಡಿಕೆ ಪತಿಯ ಆದಾಯಕ್ಕೆ ಸಂಬಂಧಿಸಿದಂತೆಯೇ ಪರಿಗಣಿಸಲಾಗುತ್ತದೆ. ಆದರೆ ಆ ಹೂಡಿಕೆಯಿಂದ ಮುಂದಿನ ದಿನಗಳಲ್ಲಿ ಬರುವ ಆದಾಯವನ್ನು ತೆರಿಗೆ ನಿಯಮಗಳ ಪ್ರಕಾರ ಪರಿಶೀಲಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ "ಕ್ಲಬ್ಬಿಂಗ್ ಆಫ್ ಇನ್‌ಕಮ್" ನಿಯಮ ಅನ್ವಯಿಸಬಹುದು.

ಗೃಹಿಣಿಯರಿಗೆ ತೆರಿಗೆ ವಿನಾಯಿತಿಗಳು

ಸೆಕ್ಷನ್ 80D: ಆರೋಗ್ಯ ವಿಮೆ (Health Insurance) ಪ್ರೀಮಿಯಂ ಪಾವತಿಸಿದರೆ ತೆರಿಗೆ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80G: ಅನುಮೋದಿತ ದತ್ತಿ ಸಂಸ್ಥೆಗಳಿಗೆ ನೀಡಿದ ದೇಣಿಗೆಗೆ ತೆರಿಗೆ ಕಡಿತ ಲಭ್ಯವಿದೆ.

ಸೆಕ್ಷನ್ 80TTA: 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಉಳಿತಾಯ ಖಾತೆಯ ಬಡ್ಡಿ ಆದಾಯದಲ್ಲಿ ₹10,000ವರೆಗೆ ಕಡಿತ ಪಡೆಯಬಹುದು.

ಸೆಕ್ಷನ್ 80TTB: ಹಿರಿಯ ನಾಗರಿಕರು ಬಡ್ಡಿ ಆದಾಯದ ಮೇಲೆ ₹50,000ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಅಂಚೆ ಕಚೇರಿ ಉಳಿತಾಯ ಖಾತೆ: ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿಯ ಮೇಲೆ ವೈಯಕ್ತಿಕ ಖಾತೆಗೆ ₹3,500 ಮತ್ತು ಜಂಟಿ ಖಾತೆಗೆ ₹7,000ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

ತೆರಿಗೆಗೆ ಒಳಪಡುವ ಆದಾಯವನ್ನು ಹೇಗೆ ಲೆಕ್ಕ ಹಾಕಬೇಕು?

ಮೊದಲು ಎಲ್ಲಾ ಮೂಲಗಳಿಂದ ಬಂದ ಆದಾಯವನ್ನು ಒಟ್ಟುಗೂಡಿಸಬೇಕು. ನಂತರ ಪಿಪಿಎಫ್ (PPF), ಎನ್‌ಎಸ್‌ಸಿ (NSC), ಆರೋಗ್ಯ ವಿಮೆ, ದೇಣಿಗೆ ಮೊದಲಾದ ಹೂಡಿಕೆಗಳ ಮೇಲೆ ಸಿಗುವ ವಿನಾಯಿತಿಗಳನ್ನು ಕಡಿತಗೊಳಿಸಬೇಕು. ಉಳಿಯುವ ಮೊತ್ತವೇ ತೆರಿಗೆಗೆ ಒಳಪಡುವ ಆದಾಯವಾಗುತ್ತದೆ.

"ನಾನು ಗೃಹಿಣಿ, ಆದ್ದರಿಂದ ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ" ಎಂಬ ಕಲ್ಪನೆ ನಿಮಗಿರಬಹುದು. ಆದರೆ ಅದು ಎಲ್ಲ ಕಾಲಕ್ಕೂ ಸರಿಯಲ್ಲ. ಗೃಹಿಣಿಯರೂ ಬ್ಯಾಂಕ್ ಬಡ್ಡಿ, ಬಾಡಿಗೆ, ಹೂಡಿಕೆ ಲಾಭ ಅಥವಾ ಇತರ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಆದಾಯ ತೆರಿಗೆ ಮಿತಿಯನ್ನು ಮೀರಿದರೆ ಐಟಿಆರ್ ಸಲ್ಲಿಸುವುದು ಕಾನೂನುಬದ್ಧ ಕರ್ತವ್ಯ ಮಾತ್ರವಲ್ಲ, ಭವಿಷ್ಯದಲ್ಲಿ ಸಾಲ, ವೀಸಾ ಅಥವಾ ಹಣಕಾಸು ವ್ಯವಹಾರಗಳಿಗೂ ಸಹಾಯಕವಾಗುತ್ತದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+