ಹೆಣ್ಮಕ್ಕಳ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಜೈಲೇ ಗತಿ
ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಯುಗದಲ್ಲಿ ಡಿಜಿಟಲ್ ವಿಕೃತಿ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಕಟ್ಟುನಿಟ್ಟಿನ ಏಕರೂಪ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ದೂರು ದಾಖಲಿಸಲು ಮೀನಮೇಷ ಎಣಿಸುವಂತಿಲ್ಲ
ಇತ್ತೀಚಿನ ದಿನಗಳಲ್ಲಿ ಬ್ಲಾಕ್‌ಮೇಲ್, ದ್ವೇಷ ಅಥವಾ ವಿಕೃತ ಮನಸ್ಥಿತಿಯಿಂದಾಗಿ ವ್ಯಕ್ತಿಗಳ ಖಾಸಗಿ ಕ್ಷಣಗಳ ವಿಡಿಯೊ ಹಾಗೂ ಫೋಟೊಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವ ಹಾಗೂ ವಿಳಂಬ ಮಾಡುತ್ತಿರುವ ಗಂಭೀರ ವಿಚಾರ ಡಿಜಿಪಿ ಡಾ. ಎಂ.ಎ. ಸಲೀಂ ಅವರ ಗಮನಕ್ಕೆ ಬಂದಿತ್ತು.

ಸಂತ್ರಸ್ತರು ಮೊದಲು ವಿಡಿಯೊ ಅಥವಾ ಫೋಟೊ ಚಿತ್ರೀಕರಣಕ್ಕೆ ತಾವಾಗಿಯೇ ಒಪ್ಪಿಗೆ ನೀಡಿದ್ದರು ಎಂಬ ಕುಂಟು ನೆಪವೊಡ್ಡಿ ಕೆಲವು ಪೊಲೀಸರು ದೂರು ಸ್ವೀಕರಿಸುತ್ತಿರಲಿಲ್ಲ. ಈ ಗೊಂದಲಗಳಿಗೆ ತೆರೆ ಎಳೆದಿರುವ ಡಿಜಿಪಿ, "ವ್ಯಕ್ತಿಯು ನಿಯಮಾನುಸಾರ ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಗೂ ಮತ್ತು ಅದನ್ನು ಇತರರಿಗೆ ಹಂಚಿಕೆ ಅಥವಾ ಪ್ರಸಾರ ಮಾಡಲು ನೀಡುವ ಒಪ್ಪಿಗೆಗೂ ಅಜಗಜಾಂತರ ವ್ಯತ್ಯಾಸವಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ತವ್ಯ ಲೋಪವೆಂದು ಪರಿಗಣಿಸಿ ಶಿಸ್ತುಕ್ರಮ
ಯಾವುದೇ ಠಾಣೆಯ ಪೊಲೀಸರು ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ, ಅಥವಾ ಪೂರ್ವಾನುಮತಿ ಎಂಬ ನೆಪವೊಡ್ಡಿ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ, ಅದನ್ನು ಗಂಭೀರ 'ಕರ್ತವ್ಯ ಲೋಪ' ಎಂದು ಪರಿಗಣಿಸಲಾಗುವುದು. ಅಂತಹ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಡಿಜಿಪಿ ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ:
1. ಒಪ್ಪಿಗೆಯ ಅರ್ಥದ ಸ್ಪಷ್ಟನೆ: ಖಾಸಗಿ ಫೋಟೊ ಅಥವಾ ವಿಡಿಯೊವನ್ನು ಸೆರೆಹಿಡಿಯಲು ಸಂತ್ರಸ್ತರು ಒಪ್ಪಿಗೆ ನೀಡಿದ್ದರೂ, ಅದನ್ನು ಮೂರನೇ ವ್ಯಕ್ತಿಗಳಿಗೆ ಹಂಚಲು ಅವರು ಸಮ್ಮತಿಸದಿದ್ದಾಗ, ಮತ್ತು ಆ ಕಂಟೆಂಟ್ ಹಂಚಿಕೆಯಾಗಿದ್ದರೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 77 ರ ವಿವರಣೆ 2 ರ ಪ್ರಕಾರ ಅದು ನೇರ ಅಪರಾಧವಾಗುತ್ತದೆ.
2. ಲಿಂಗ ತಟಸ್ಥ ಕಾನೂನು: ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳು ಲಿಂಗ ತಟಸ್ಥವಾಗಿವೆ (ಪುರುಷ ಮತ್ತು ಮಹಿಳೆ ಇಬ್ಬರಿಗೂ ಅನ್ವಯ). ಹೀಗಾಗಿ ಚಿತ್ರೀಕರಣಕ್ಕೆ ಪೂರ್ವಾನುಮತಿ ಇದ್ದರೂ, ಹಂಚಲು ಅನುಮತಿಯಿಲ್ಲದೆ ಪ್ರಸಾರ ಮಾಡಿದರೆ ಅದು ಮುಖ್ಯ ಅಪರಾಧ.
3. ಮಹಿಳೆಯರ ಗೌಪ್ಯತೆ ಉಲ್ಲಂಘನೆ: ಮಹಿಳೆಯೊಬ್ಬಳು ಖಾಸಗಿ ಕ್ರಿಯೆಯಲ್ಲಿ ತೊಡಗಿರುವಾಗ, ಯಾರೂ ನೋಡಬಾರದೆಂಬ ನಿರೀಕ್ಷೆಯ ಪರಿಸ್ಥಿತಿಯಲ್ಲಿ ಆಕೆಯನ್ನು ಗುಟ್ಟಾಗಿ ನೋಡುವುದು, ಫೋಟೊ ಅಥವಾ ವಿಡಿಯೊ ಸೆರೆ ಹಿಡಿಯುವುದು ಮತ್ತು ಅವುಗಳನ್ನು ಪ್ರಸಾರ ಮಾಡುವುದು ಬಿಎನ್‌ಎಸ್ ಸೆಕ್ಷನ್ 77 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಇದು ಮಹಿಳಾ ಸಂತ್ರಸ್ತರಿಗೆ ಮಾತ್ರ ವಿಶೇಷವಾಗಿ ಅನ್ವಯವಾಗುತ್ತದೆ.
4. ಖಾಸಗಿ ಅಂಗಗಳ ಚಿತ್ರೀಕರಣ: ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳ ಫೋಟೊ ಅಥವಾ ವಿಡಿಯೊವನ್ನು ಅವರ ಅನುಮತಿಯಿಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಗೌಪ್ಯತೆಯನ್ನು ಉಲ್ಲಂಘಿಸುವ ಸಂದರ್ಭಗಳಲ್ಲಿ ನಡೆದರೆ ಅದು ಐಟಿ ಕಾಯ್ದೆ ಸೆಕ್ಷನ್ 66(ಇ) ಪ್ರಕಾರ ಖಾಸಗಿತನದ ಉಲ್ಲಂಘನೆ ಹಾಗೂ ಅಪರಾಧವಾಗಿದೆ.
5. ಅಶ್ಲೀಲ ಕಂಟೆಂಟ್ ಪ್ರಸಾರ: ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ, ಕಾಮ ಉದ್ದೀಪನಗೊಳಿಸುವ ಅಥವಾ ಕಾಮ ಪ್ರಚೋದಕ ವಿಷಯಗಳನ್ನು ಪ್ರಕಟಿಸುವುದು ಹಾಗೂ ಮೊಬೈಲ್/ಇಂಟರ್ನೆಟ್ ಮೂಲಕ ಪ್ರಸಾರ ಮಾಡುವುದು ಐಟಿ ಕಾಯ್ದೆಯ ಸೆಕ್ಷನ್ 67ರ ಅನ್ವಯ ಗಂಭೀರ ಅಪರಾಧವಾಗಿದೆ.
ಒಟ್ಟಾರೆಯಾಗಿ, ರಾಜ್ಯ ಪೊಲೀಸ್ ಇಲಾಖೆಯು ಹೊರಡಿಸಿರುವ ಈ ಹೊಸ ಮಾರ್ಗಸೂಚಿಯಿಂದಾಗಿ ಸೈಬರ್ ಬ್ಲಾಕ್‌ಮೇಲ್ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಖಾಸಗಿ ವಿಡಿಯೊ ಹಂಚಿಕೆ (Revenge Porn) ಪ್ರಕರಣಗಳ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಸಿಗುವ ಭರವಸೆ ಮೂಡಿದೆ. ಪೊಲೀಸ್ ಇಲಾಖೆಯ ಈ ದಿಟ್ಟ ಹೆಜ್ಜೆಯು ಡಿಜಿಟಲ್ ಜಗತ್ತಿನಲ್ಲಿ ವಿಕೃತಿ ಮೆರೆಯುವ ಕಿಡಿಗೇಡಿಗಳಿಗೆ ನಡುಕ ಹುಟ್ಟಿಸುವುದು ಖಚಿತವಾಗಿದೆ.












Click it and Unblock the Notifications