ಎದ್ದ ಕೂಡಲೇ ಮೊಬೈಲ್ ನೋಡಿದ್ರೇ ಸ್ಟ್ರೆಸ್ ಹೆಚ್ಚಾಗಿ ಹುಚ್ಚರಾದಂತಾಗಬಹುದು! ಹುಷಾರು

ಬಹುತೇಕ ಜನ ಬೆಳಗ್ಗೆ ಹಾಸಿಗೆಯಲ್ಲಿ ಕಣ್ಣು ತೆರೆದ ತಕ್ಷಣ ಪಕ್ಕದಲ್ಲಿ ತಡಕಾಡಿ ಮೊಬೈಲ್‌ ಎತ್ತಿಕೊಂಡು ಸ್ಕ್ರೋಲ್‌ ಮಾಡಲು ಶುರು ಮಾಡುತ್ತಾರೆ. ವಾಟ್ಸ್‌ಆ್ಯಪ್ ಸಂದೇಶಗಳು, ಇ-ಮೇಲ್‌ಗಳು, ಸಾಮಾಜಿಕ ಜಾಲತಾಣಗಳ ಅಪ್‌ಡೇಟ್‌ಗಳು ಅಥವಾ ಸುದ್ದಿಗಳನ್ನು ಹಾಸಿಗೆಯಿಂದ ಏಳುವ ಮೊದಲೇ ಪರಿಶೀಲಿಸುವುದು ಸಾಮಾನ್ಯವಾಗಿದೆ. ಈ ಅಭ್ಯಾಸವು ನಿರಪಾಯವಾಗಿ ಕಂಡರೂ, ಅದು ನಮ್ಮ ಮಾನಸಿಕ ಆರೋಗ್ಯ ಮತ್ತು ಕಣ್ಣಿನ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ದಿನದ ಮೊದಲ ಕೆಲವು ನಿಮಿಷಗಳು

ನಾವು ನಿದ್ರೆಯಿಂದ ಎದ್ದಾಗ ನಮ್ಮ ಮೆದುಳು ನಿಧಾನವಾಗಿ ವಿಶ್ರಾಂತಿಯ ಸ್ಥಿತಿಯಿಂದ ಎಚ್ಚರದ ಸ್ಥಿತಿಗೆ ಬದಲಾಗುತ್ತದೆ. ಈ ಸಮಯದಲ್ಲಿ ಮೆದುಳಿಗೆ ಶಾಂತ ವಾತಾವರಣ ಬೇಕಾಗಿರುತ್ತದೆ. ಆದರೆ ಮೊಬೈಲ್‌ನಲ್ಲಿರುವ ಸಂದೇಶಗಳು, ಕೆಲಸದ ಸೂಚನೆಗಳು, ತುರ್ತು ಸುದ್ದಿಗಳು ಅಥವಾ ಸಾಮಾಜಿಕ ಜಾಲತಾಣಗಳ ಮಾಹಿತಿಗಳು ಮೆದುಳನ್ನು ತಕ್ಷಣವೇ ಚುರುಕುಗೊಳಿಸುತ್ತವೆ.

Checking Your Phone

ಇದರಿಂದ ದೇಹದಲ್ಲಿ ಒತ್ತಡಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ಅನಗತ್ಯವಾಗಿ ಆರಂಭವಾಗಬಹುದು. ಕೆಲವರು ಬೆಳಿಗ್ಗೆಯೇ ಆತಂಕ, ಗೊಂದಲ ಅಥವಾ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಇದಕ್ಕೆ ಅವರ ಬೆಳಗಿನ ಮೊಬೈಲ್ ಬಳಕೆಯೂ ಒಂದು ಕಾರಣವಾಗಿರಬಹುದು.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಬೆಳಿಗ್ಗೆ ಎದ್ದ ತಕ್ಷಣ ಹೆಚ್ಚು ಮಾಹಿತಿಯನ್ನು ಸ್ವೀಕರಿಸುವುದರಿಂದ ಮನಸ್ಸಿನಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ. ದಿನವನ್ನು ನಮ್ಮ ಯೋಜನೆಗಳ ಪ್ರಕಾರ ಆರಂಭಿಸುವ ಬದಲು, ಇತರರ ಸಂದೇಶಗಳು ಮತ್ತು ಬೇಡಿಕೆಗಳಿಗೆ ಪ್ರತಿಕ್ರಿಯಿಸುತ್ತಲೇ ಆರಂಭಿಸುತ್ತೇವೆ. ಇದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು -

- ಆತಂಕ ಹೆಚ್ಚಾಗಬಹುದು
- ಮನಸ್ಸು ಚಂಚಲವಾಗಬಹುದು
- ಏಕಾಗ್ರತೆ ಕಡಿಮೆಯಾಗಬಹುದು
- ದಿನವಿಡೀ ಒತ್ತಡದ ಭಾವನೆ ಕಾಡಬಹುದು
- ಕೆಲಸಗಳಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು

ಮನೋವೈದ್ಯರ ಪ್ರಕಾರ, ಬೆಳಗಿನ ಸಮಯದಲ್ಲಿ ಅತಿಯಾದ ಡಿಜಿಟಲ್ ಪ್ರಚೋದನೆ ದಿನವಿಡೀ ನಮ್ಮ ಮನಸ್ಥಿತಿಯನ್ನು ಪ್ರಭಾವಿಸಬಹುದು.

ಮಕ್ಕಳ ಮೊಬೈಲ್ ಬಳಕೆ: ನಿಷೇಧಕ್ಕಿಂತ ಡಿಜಿಟಲ್ ಪೇರಂಟಿಂಗ್ ಅಗತ್ಯ ಎಂದು ತಜ್ಞರ ಸಲಹೆ
ಮಕ್ಕಳ ಮೊಬೈಲ್ ಬಳಕೆ: ನಿಷೇಧಕ್ಕಿಂತ ಡಿಜಿಟಲ್ ಪೇರಂಟಿಂಗ್ ಅಗತ್ಯ ಎಂದು ತಜ್ಞರ ಸಲಹೆ

ಕಣ್ಣುಗಳಿಗೂ ಅಪಾಯ ಇದೆಯೇ?

ಹೌದು. ಮೊಬೈಲ್ ಬಳಕೆಯ ಪರಿಣಾಮ ಕೇವಲ ಮನಸ್ಸಿಗೆ ಮಾತ್ರ ಸೀಮಿತವಾಗಿಲ್ಲ. ನಿದ್ರೆಯ ಸಮಯದಲ್ಲಿ ಕಣ್ಣೀರು ಉತ್ಪಾದನೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಎದ್ದ ತಕ್ಷಣ ಕಣ್ಣುಗಳು ಸ್ವಲ್ಪ ಒಣಗಿದಂತೆ ಅನುಭವವಾಗುವುದು ಸಾಮಾನ್ಯ. ಇಂತಹ ಸಮಯದಲ್ಲಿ ಮೊಬೈಲ್‌ನ ಪ್ರಕಾಶಮಾನವಾದ ಪರದೆಯನ್ನು ನೋಡುವುದು ಕಣ್ಣಿನ ಅಸ್ವಸ್ಥತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಉಂಟಾಗುವ ಸಮಸ್ಯೆಗಳು-

- ಕಣ್ಣು ಒಣಗುವುದು
- ಕಣ್ಣಿನಲ್ಲಿ ಕಿರಿಕಿರಿ
- ದೃಷ್ಟಿ ಆಯಾಸ
- ಕಣ್ಣಿನ ಸುಸ್ತು
- ಗಮನ ಕೇಂದ್ರೀಕರಿಸಲು ತೊಂದರೆ

ಡಿಜಿಟಲ್ ಐ ಸ್ಟ್ರೇನ್ ಏಕೆ ಹೆಚ್ಚುತ್ತಿದೆ?

ಸಂಶೋಧನೆಗಳ ಪ್ರಕಾರ, ಡಿಜಿಟಲ್ ಪರದೆಗಳನ್ನು ನೋಡುವಾಗ ಜನರು ಸಾಮಾನ್ಯಕ್ಕಿಂತ ಕಡಿಮೆ ಬಾರಿ ಕಣ್ಣು ಮಿಟುಕಿಸುತ್ತಾರೆ. ಇದರಿಂದ ಕಣ್ಣಿನ ತೇವಾಂಶ ಕಡಿಮೆಯಾಗುತ್ತದೆ ಮತ್ತು ಒಣಗುವಿಕೆ ಹೆಚ್ಚಾಗುತ್ತದೆ. ದಿನವಿಡೀ ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ಲೆಟ್ ಬಳಸುವವರಲ್ಲಿ "ಡಿಜಿಟಲ್ ಐ ಸ್ಟ್ರೇನ್" ಎಂಬ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇದು ಈಗ ಯುವಕರು ಮತ್ತು ಹದಿಹರೆಯದವರಲ್ಲಿಯೂ ಸಾಮಾನ್ಯವಾಗುತ್ತಿದೆ.

ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು?
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು?

ಆರೋಗ್ಯಕರ ಬೆಳಗಿನ ಆರಂಭ ಹೇಗಿರಬೇಕು?

ತಜ್ಞರ ಪ್ರಕಾರ, ಎದ್ದ ತಕ್ಷಣ ಕನಿಷ್ಠ 15 ರಿಂದ 30 ನಿಮಿಷಗಳವರೆಗೆ ಮೊಬೈಲ್‌ನಿಂದ ದೂರವಿರುವುದು ಉತ್ತಮ. ಈ ಸಮಯದಲ್ಲಿ ದೇಹ ಹಾಗೂ ಕಣ್ಣುಗಳಿಗೆ ಶಾಂತಿ, ನೆಮ್ಮದಿಯ ಆರಂಭವನ್ನು ನೀಡಬೇಕು. ಒತ್ತಡ, ಧಾವಂತ ಇರಬಾರದು.

ಎದ್ದ ಕೂಡಲೆ ಸ್ವಲ್ಪ ಸ್ಟ್ರೆಚಿಂಗ್ ಮಾಡಬಹುದು. ಒಂದು ಗ್ಲಾಸ್ ನೀರು ಕುಡಿಯಬಹುದು. ಕಿಟಕಿಯನ್ನು ತೆರೆದು ನೈಸರ್ಗಿಕ ಬೆಳಕನ್ನು ಒಳಗೆ ಬರಲು ಬಿಡಬಹುದು. ಆಳವಾದ ಉಸಿರಾಟದ ಅಭ್ಯಾಸ ಮಾಡಬಹುದು. ದಿನದ ಯೋಜನೆ ಬಗ್ಗೆ ಯೋಚಿಸಬಹುದು. ಇವು ಮನಸ್ಸನ್ನು ಶಾಂತಗೊಳಿಸಿ ದಿನವನ್ನು ಉತ್ತಮವಾಗಿ ಆರಂಭಿಸಲು ಸಹಾಯ ಮಾಡುತ್ತವೆ.

ಮೊಬೈಲ್ ಫೋನೇ ಸಮಸ್ಯೆಯಲ್ಲ. ಸಮಸ್ಯೆ ಎಂದರೆ ದಿನದ ಮೊದಲ ಅನುಭವವೇ ಡಿಜಿಟಲ್ ಪ್ರಚೋದನೆಯಿಂದ ಆರಂಭಿಸುವುದು. ನಮ್ಮ ಮೆದುಳು ಮತ್ತು ಕಣ್ಣುಗಳಿಗೆ ಸಂಪೂರ್ಣವಾಗಿ ಎಚ್ಚರಗೊಳ್ಳಲು ಸ್ವಲ್ಪ ಸಮಯ ನೀಡಿದರೆ, ದಿನವನ್ನು ಹೆಚ್ಚು ಶಾಂತವಾಗಿ, ಏಕಾಗ್ರತೆಯಿಂದ ಮತ್ತು ಆರೋಗ್ಯಕರವಾಗಿ ಆರಂಭಿಸಬಹುದು. ಆದ್ದರಿಂದ ನಾಳೆಯಿಂದ ಎದ್ದ ತಕ್ಷಣ ಮೊಬೈಲ್ ನೋಡುವ ಬದಲು, ಮೊದಲು ನಿಮ್ಮ ಮನಸ್ಸು ಮತ್ತು ಕಣ್ಣುಗಳಿಗೆ ಎಚ್ಚರಗೊಳ್ಳುವ ಅವಕಾಶ ನೀಡಿ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+