ಬಿಜೆಪಿ : ಟಿಕೆಟ್ ಹಂಚಿಕೆ ಗೊಂದಲದ ಗೂಡು

ಮಂಗಳವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಿತು. ಸಿಎಂ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಸದಾನಂದಗೌಡ, ಸಂಸದ ಅನಂತ ಕುಮಾರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ಬೆಂಗಳೂರು ನಗರದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಸಭೆಯನ್ನು ಮುಂದೂಡಲಾಗಿದೆ. ಪಕ್ಷದ ಮೂಲಗಳ ಪ್ರಕಾರ 86 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಪಕ್ಷ ಬಿಡುವವರು, ಸೇರುವವರು ಮುಂತಾದ ಬೆಳವಣಿಗೆಗಳನ್ನು ನೋಡಿಕೊಂಡು ಅಂತಿಮ ಪಟ್ಟಿ ತಯಾರಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಬಿಜೆಪಿಯಿಂದ ಬಂದ ಮೂರು ಹೆಸರುಗಳನ್ನು ಪರಿಶೀಲಿಸಿ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ನಾಯಕರಲ್ಲೇ ಗೊಂದಲವುಂಟಾಗಿ ಸಭೆ ಮುಗಿದು ಹೋಗಿದೆ. ಸಂಸದರಿಗೆ ಟಿಕೆಟ್ ನೀಡುವುದು, ಹಾಲಿ ಶಾಸಕರಿಗೆ ಟಿಕೆಟ್ ನೀಡಿಕೆ, ಕ್ರಿಮಿನಲ್ ಹಿನ್ನೆಲೆ ನಾಯಕರಿಗೆ ಟಿಕೆಟ್ ನೀಡುವುದು ಮುಂತಾದ ಗಂಭೀರ ವಿಚಾರಗಳ ಬಗ್ಗೆ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಸಭೆಯನ್ನು ಮುಂದೂಡಲಾಗಿದೆ.
ಪಕ್ಷದ ಪ್ರಮುಖರ ಪ್ರಕಾರ ಸಂಸದ ನಳೀನ್ ಕುಮಾರ್ ಕಟೀಲ್, ಪಿ.ಸಿ.ಮೋಹನ್ ಅವರಿಗೆ ವಿಧಾನಸಭೆ ಟಿಕೆಟ್ ದೊರೆಯುವುದು ಖಚಿತವಾಗಿದೆ. ಪುತ್ತೂರಿನಿಂದ ಮಾಜಿ ಸಿಎಂ ಸದಾನಂದ ಗೌಡರ ಸ್ಪರ್ಧೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆದ್ದರಿಂದ ಮಾ.31ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ವಲಸಿಗರಿಂದ ಸಂಕಷ್ಟ : ಕೆಜೆಪಿ, ಕಾಂಗ್ರೆಸ್ ಕದ ತಟ್ಟುತ್ತಿರುವ ಶಾಸಕರರಿಂದಾಗಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಯಾರು ಯಾವ ಪಕ್ಷ ಸೇರುತ್ತಾರೆ. ಬಿಜೆಪಿಯಲ್ಲಿ ಉಳಿಯುವು ನಾಯಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಮಾ.29, 30ರಂದು ನಡೆಯುವ ಕೆಜೆಪಿ ಸಮಾವೇಶದ ನಂತರ ಅಂತಿಮ ನಿರ್ಧಾರ ತೆಗೆದುಕೊಂಡು ಕೆಲ ಶಾಸಕರು ಪಕ್ಷ ತೊರೆಯವ ಸಂಭವವಿದೆ. ಆದ್ದರಿಂದ ನಂತರ ಸಭೆ ಸೇರಿ ಚರ್ಚೆ ನಡೆಸಿ, ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ಮಂಗಳವಾರ ನಡೆದ ಸಭೆಯಲ್ಲಿ ಒಟ್ಟು 86 ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸಲಾಗಿದೆ. ಒನ್ ಇಂಡಿಯಾಗೆ ದೊರಕಿರುವ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಉಳಿದ ಜಿಲ್ಲೆಗಳ ಹಾಲಿ ಶಾಸಕರ ಪಟ್ಟಿಯನ್ನು ಮಾತ್ರ ಅಂತಿಮಗೊಳಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications