ಪುತ್ತೂರಿನಿಂದ ಸದಾನಂದಗೌಡರ ಸ್ಪರ್ಧೆ ?

ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪುತ್ತೂರಿನಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸ್ಪರ್ಧಿಸಲು ಬಿಜೆಪಿ ನಾಯಕರು ಅಂತಿಮ ಮುದ್ರೆ ಒತ್ತಿದ್ದಾರೆ. ಮೊದಲು ಸಮಿತಿಯ ನಿರ್ಧಾರಕ್ಕೆ ಒಪ್ಪದ ಡಿವಿಎಸ್ ನಾಯಕರ ಒತ್ತಾಯದ ನಂತರ ಸಮ್ಮತಿ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಷ್ಟ್ರರಾಜಕಾರಣಕ್ಕೆ ತೆರಳುತ್ತೇನೆ, ರಾಜ್ಯ ರಾಜಕೀಯಕ್ಕೆ ಮರಳುವುದಿಲ್ಲ ಎಂಬ ಡಿವಿಎಸ್ ಮನವೊಲಿಸಿರುವ ಪಕ್ಷದ ನಾಯಕರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಸದಾನಂದಗೌಡರು ಹೆಸರನ್ನು ಸೇರಿಸಿ ಈಗಾಗಲೇ ಹೈ ಕಮಾಂಡ್ ಗೆ ಕಳುಹಿಸಿಕೊಡಲಾಗಿದೆ.
ಕಾಂಗ್ರೆಸ್ ನಿಂದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪುತ್ತೂರಿನಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಅವರ ಎದುರು ಪ್ರಬಲ ಅಭ್ಯರ್ಥಿ ನಿಲ್ಲಿಸದಿದ್ದರೆ ಪುತ್ತೂರು ಕೈ' ವಶವಾಗುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಬಿಜೆಪಿ ನಾಯಕರು ಸದಾನಂದ ಗೌಡರ ಮನವೊಲಿಸಿ ಸ್ಪರ್ಧೆಗೆ ಸಜ್ಜುಗೊಳಿಸಿದ್ದಾರೆ.
ಈಗಾಗಲೇ 1994, 1999ರ ಚುನಾವಣೆಯಲ್ಲಿ ಪುತ್ತೂರಿನಿಂದ ಶಾಸಕರಾಗಿ ಆಯ್ಕೆಯಾಗಿ ಡಿವಿಎಸ್ ವಿಧಾನಸಭೆ ಪ್ರವೇಶಿಸಿದ್ದರು. ನಂತರ 2004ರಲ್ಲಿ ಮಂಗಳೂರು ಮತ್ತು 2009ರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ್ದರು.
ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಡಿ.ವಿ.ಸದಾನಂದಗೌಡರ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಶಾಸಕ, ಸಂಸದ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹೀಗೆ ವಿವಿಧ ಹುದ್ದೆ ನಿಬಾಯಿಸಿರುವ ಗೌಡರು ರಾಷ್ಟ್ರ ರಾಜಕಾರಣಕ್ಕೆ ಜಿಗಿದರೆ ರಾಜ್ಯ ಬಿಜೆಪಿಗೆ ನಷ್ಟ ಉಂಟಾಗುತ್ತದೆ ಎಂದು ಅವರನ್ನು ಚುನಾವಣೆಗೆ ನಿಲ್ಲಿಸುವ ರಣತಂತ್ರವನ್ನು ಪಕ್ಷದ ನಾಯಕರು ರೂಪಿಸಿದ್ದಾರೆ.
ಮಲ್ಲಿಕಾ ಪ್ರಸಾದ್ ಗೆ ಕೊಕ್ : ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಪುತ್ತೂರಿನಿಂದ ಸ್ಪರ್ಧಿಸುತ್ತಿರುವುದರಿಂದ ಹಾಲಿ ಶಾಸಕಿ ಮಲ್ಲಿಕಾ ಪ್ರಸಾದ್ ಟಿಕೆಟ್ ವಂಚಿತರಾಗಲಿದ್ದಾರೆ. ಇವರಿಗೆ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಕುರಿತು ಚಿಂತನೆ ನಡೆಯುತ್ತಿದ್ದು, ಕ್ಷೇತ್ರದ ಹೆಸರು ಅಂತಿಮವಾಗಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications