Vijay: ನಾಯಕನಿಗಾಗಿ ಕಾದ ತಮಿಳುನಾಡು... ವಿಜಯ್‌ ಆಯ್ಕೆ ಮಾಡಿಕೊಂಡಿರಬಹುದೇ: ಹರೀಶ್ ಗಂಗಾಧರ್ ಬರಹ

Vijay: ನಾಯಕನಿಗಾಗಿ ಕಾದ ತಮಿಳುನಾಡು... ವಿಜಯ್‌ ಆಯ್ಕೆ ಮಾಡಿಕೊಂಡಿರಬಹುದೇ ಹವ್ಯಾಸಿ ಬರಹಗಾರ ಹಾಗೂ ಪ್ರೊಫೆಸರ್ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ.

Vijay: ನಾಯಕನಿಗಾಗಿ ಕಾದ ತಮಿಳುನಾಡು... ವಿಜಯ್‌ ಆಯ್ಕೆ ಮಾಡಿಕೊಂಡಿರಬಹುದೇ ಹವ್ಯಾಸಿ ಬರಹಗಾರ ಹಾಗೂ ಪ್ರೊಫೆಸರ್ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ.

ನಾಯಕನಿಗಾಗಿ ಕಾದ ತಮಿಳುನಾಡು... ವಿಜಯ್‌ ಆಯ್ಕೆ ಮಾಡಿಕೊಂಡಿರಬಹುದೇ.. ಅದು 2004. ನಾನು ಎಂಎ ವ್ಯಾಸಂಗ ಮುಗಿಸಿ ಒಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ. ಹುಟ್ಟು ತರಲೆ ಹುಡುಗರ, ಹೆಚ್ಚು ತಮಿಳರೇ ಓದುತ್ತಿದ್ದ ಶಾಲೆಯದು. ಅಸಾಧಾರಣ ಎನರ್ಜಿ, ಅಪರಿಮಿತ ಜೋಷ್, ಕೊನೆಯಿಲ್ಲದ ಕೀಟಲೆಗಳ ನಡುವೆ ನಾ ಅವರಿಗೆ ಬೋಧಿಸಬೇಕಿತ್ತು. ದಂಡ ಹಿಡಿದು, ಗದರಿಸಿ, ಬೆದರಿಸಿ ಹತೋಟಿಯಲ್ಲಿಡುವ ತಂತ್ರ ಯಶಸ್ವಿಯಾಗುವುದಿಲ್ಲವೆಂದು ನನಗೆ ಅರಿವಾಗಿತ್ತು. ನಾ ತರಗತಿಗೆ ಎಂಟ್ರಿ ಕೊಡುತ್ತಿದ್ದಂತೆ ಸೀಟಿ ಕೇಳಿಸುತ್ತಿತ್ತು, ತಮಿಳಿನಲ್ಲಿ ಏನೋ ನನಗೆ ಅರ್ಥವಾಗದ ಕಾಮೆಂಟ್‌ಗಳು ಬೇರೆ. ಆದರೆ ಕೋಪಗೊಳ್ಳದೆ ಅವರೊಡನೆ ಸ್ನೇಹ ಬೆಳೆಸಿಕೊಂಡೆ. ಬೋಧನೆಗೆ ಅತ್ಯಗತ್ಯವಾಗಬೇಕಾದ ಸಂಯಮ, ಮಾನವೀಯತೆ, ಸಹಾನುಭೂತಿಯ- ನಾನು ಎಲ್ಲಾ ತಿಳಿದಿರುವ ಪರಮ ಜ್ಞಾನಿಯಲ್ಲ, ನಾನು ಕೂಡ ಹಲವು ವಿಷಯಗಳಲ್ಲಿ ಅಜ್ಞಾನಿಯೂ ಹೌದು ಮತ್ತು ದುರ್ಬಲನೂ ಹೌದು.

Vijay

ಬನ್ನಿ ಒಟ್ಟಿಗೆ ಕಲಿಕೆಯಲ್ಲಿ ತೊಡಗುವ ಎಂಬ ಗುಣ ಕಲಿತ ದಿನಗಳವು. ಬೆಲ್ ಹುಕ್ಸ್ ಬರೆದ "ಟೀಚಿಂಗ್ ಟು ಟ್ರಾನ್ಸ್‌ಗ್ರೇಸ್" ಕೃತಿಯಲ್ಲಿನ Engaged pedagogyಯಲ್ಲಿ ಗೊತ್ತಿಲ್ಲದೆ ತೊಡಗಿಕೊಂಡ ದಿನಗಳವು. ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾ ಅವರಿಂದ ಕಲಿತು ಬೆಳೆದ ದಿನಗಳವು. ಆ ಶಾಲೆ ತೊರೆದು ಕಾಲೇಜಿನಲ್ಲಿ ಬೋಧಿಸಲು ಹೊರಟಾಗ ಎದೆ ಭಾರವಾಗಿತ್ತು. ಅನೌಪಚಾರಿಕ ಬೀಳ್ಕೊಡುಗೆ ಭೇಟಿಯಲ್ಲಿ ಮಕ್ಕಳು "ಅಪ್ಪಾಡಿ ಪೋಡು ಪೋಡು... " ಎಂಬ ಪೆಪ್ಪಿ ಹಾಡಿಗೆ ನನ್ನ ಕೂಡ ಕುಣಿಸಿದ್ದರು. ನಂತರ ತಿಳಿದದ್ದು ಆ ಹಾಡು ತಿಮಿಳಿನ ಸೂಪರ್ ಸ್ಟಾರ್ ವಿಜಯ್ "ಗಿಲ್ಲಿ" ಚಿತ್ರದ್ದು ಎಂದು.

ಅಂದಿಂದ ಇಂದಿನವರೆಗೆ ವಿಜಯ್ ಅವರನ್ನು ಗಮನಿಸುತ್ತಲೇ ಬಂದಿದ್ದೇನೆ. ಆಕ್ಷನ್ ಭರಿತ ರೋಮ್ಯಾನ್ಸ್, ಫ್ಯಾಮಿಲಿ ಡ್ರಾಮಾ, ಸಹೋದರ ಕರ್ತವ್ಯ, ಮೆಡಿಕಲ್-ಫಾರ್ಮಸಿ ಮಾಫಿಯಾ, ಶಿಕ್ಷಣದ ವ್ಯಾಪಾರೀಕರಣ, ಮಹಿಳಾ ಸಬಲೀಕರಣ, ಕಾರ್ಪೊರೇಟ್ ಶೋಷಣೆ, ನಾಯಕತ್ವ, ಪ್ರಜಾಪ್ರಭುತ್ವ, ಬಾಲಪರಾಧಿಗಳ ವಿಮೋಚನೆ -ಹೀಗೆ ಹಲವು ವಿಷಯಾಧಾರಿತ ಚಿತ್ರಗಳಲ್ಲಿ ನಟಿಸಿದ ವಿಜಯ್, ಒಂದು ಪೂರ್ವನಿರ್ಧಾರಿತ ಗುರಿಯಿಟ್ಟುಕೊಂಡು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಪಕ್ಕ ಮಾಸ್ ಡೈಲಾಗ್, ನ್ಯಾಯದ ಪರವಾಗಿ ನಿಲ್ಲುವ, ಯುವ ಜನತೆಗೆ ಅಪೀಲಿಂಗ್ ಆಗಿರುವ "ಬ್ಯಾಡ್ ಆಸ್ ಗಯ್" ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು ನನಗಂತೂ ಅಚ್ಚರಿ ತಂದಿಲ್ಲ.

ವಿಜಯ್ ಈ ಗೆಲುವಿಗೆ ಸಿದ್ಧತೆ ಶುರು ಮಾಡಿದ್ದು 2009. ಆ ವರುಷ ವಿಜಯ್ "ವಿಜಯ್ ಮಕ್ಕಳ್ ಇಯಕ್ಕಂ" ಎಂಬ ಅಭಿಮಾನಿಗಳ ಸಂಘಟನೆ ಆರಂಭಿಸಿದರು. ಮಿಂಚಿನ ವೇಗದಲ್ಲಿ ಈ ಸಂಘಟನೆ ಹಿಗ್ಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿತು. ಬಡವರಿಗೆ ಉಚಿತ ಊಟ ಒದಗಿಸುವ ಕ್ಯಾಂಟೀನ್, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ರಕ್ತದಾನ ಶಿಬಿರಗಳ ಆಯೋಜನೆ ಕಾರ್ಯಗಳಲ್ಲಿ ತೊಡಗಿದ ಸಂಘಟನೆಗೆ ಮತ್ತಷ್ಟು ಹುರುಪು ಹಣ ಬೆಂಬಲ ನೀಡಿದ ವಿಜಯ್ ಅವರನ್ನು ಪ್ರವಾಹ, ಚಂಡಮಾರುತ ವಿಪತ್ತು ಪರಿಹಾರ ಕಾರ್ಯಗಳಲ್ಲೂ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಹೀಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ವಿಜಯ್ ಅಭಿಮಾನಿಗಳು ಪ್ರಾದೇಶಿಕ/ಸ್ಥಳೀಯ ಚುನಾವಣೆಗಳಲ್ಲಿ ಗೆದ್ದದ್ದೂ ಇದೆ. ತಮಿಳು ನೆಲದ ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆಯನ್ನು ಬ್ಯಾನ್ ಮಾಡಲು ಉಚ್ಚನ್ಯಾಯಾಲಯ ಮುಂದಾದಾಗ ವಿಜಯ್ ತಮಿಳರ ಬೆಂಬಲಕ್ಕೆ ನಿಂತರು.

ಅಸ್ತಿತ್ವದಲ್ಲಿರುವ ಅಧಿಕಾರ ವಿರೋಧಿ ನಿಲುವಿನ ವಿಜಯ್ ಮಾಸ್ಕ್ ತೊಟ್ಟು ಪ್ರತಿಭಟನಾಕಾರರ ನಡುವೆ ಕಾಣಿಸಿಕೊಂಡದ್ದು ಇದೆ. ತಮಿಳುನಾಡಿನ ಹನ್ನೆರಡನೇ ತರಗತಿಯಲ್ಲಿ ಟಾಪರ್ ಆದರೂ ನೀಟ್ ಪರೀಕ್ಷೆಯಲ್ಲಿ "ಅರ್ಹತೆ" ಗಳಿಸದೆ ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಸ್ ಅನಿತಾರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅಂದಿನಿಂದ ನೀಟ್ ಪರೀಕ್ಷೆಯ ವಿರುದ್ಧ ನಿಲುವಿಗೆ ಬದ್ಧ ಎಂದು ಸಾರಿದರು. ತೂತುಕುಡಿಯ ವಾತಾವರಣವನ್ನು ವಿಷಮಗೊಳಿಸುತ್ತಿದ್ದ ವೇದಾಂತ ಸ್ಟೆರಲೈಟ್ ಕಾಪರ್ ಘಟಕದ ವಿರುದ್ಧ ಪ್ರತಿಭಟನೆಗಿಳಿದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಹದಿಮೂರು ಮಂದಿ ಪ್ರಾಣ ಬಿಟ್ಟರು. ವಿಜಯ್ ತೂತುಕುಡಿಯ ಸಂತ್ರಸ್ತರನ್ನು ಸಂತೈಸಿದರು.

ಫೆ. 2, 2024ರಂದು ಟಿವಿಕೆ ಪಾರ್ಟಿ ಘೋಷಿಸಿದ ವಿಜಯ್ ಅವರಿಗೆ ಕರೂರ್ ಕಾಲ್ತುಳಿತ ದುರಂತದ ಕಳಂಕ ಅಂಟಿಕೊಂಡರೂ, ಕಾಲ್ತುಳಿತಕ್ಕೆ ಬಲಿಯಾದ 41 ಮಂದಿಯ ಕುಟುಂಬಸ್ಥರನ್ನು ಚೆನ್ನೈಗೆ ಕರೆಸಿ ಸಮಾಧಾನ ಮಾಡುವಲ್ಲಿ ಯಶಸ್ವಿಯಾದರು. ಕರೂರ್ ಕಾಲ್ತುಳಿತಕ್ಕೆ ಆಡಳಿತಾರೂಢ ಡಿಎಂಕೆ ನೇರ ಹೊಣೆಯೆಂದು ಬಿಂಬಿಸುವಲ್ಲಿ ವಿಜಯ್ ಗೆದ್ದರು. ಕಳೆದ ಹದಿನೈದು ವರುಷಗಳಲ್ಲಿ ವಿಜಯ್ ರಾಹುಲ್ ಗಾಂಧಿ, ಗುಜರಾತ್ ಮುಖ್ಯಮಂತ್ರಿ ದಿನಗಳಲ್ಲಿ ನರೇಂದ್ರ ಮೋದಿಯವರನ್ನು, ಲೋಕಪಾಲ್ ಬಿಲ್ ಹೋರಾಟದ ರೂವಾರಿ ಅಣ್ಣಾ ಹಜಾರೆಯವರನ್ನು ಭೇಟಿಯಾಗಿದ್ದು He is tracking all the political and social upheavals ಎಂಬುದನ್ನು ಖಾತರಿಪಡಿಸುತ್ತದೆ.

ಬಹುಪಾಲು ವಿಜಯ್ ಅಭಿಯಾನ ನಡೆದದ್ದು insta, ಟ್ವಿಟರ್ ಮತ್ತು ಯುಟ್ಯೂಬ್ ನಲ್ಲಿ. ವಿಜಯ್ ಸಭೆಗಳಲ್ಲಿ ಅತಿಯಾಗಿ ಕಾಣಿಸಿಕೊಳ್ಳಲಿಲ್ಲ. ಕೆಲವು ಕಡೆ ಪ್ರಚಾರಕ್ಕೆ ತದ್ರೂಪಿಯನ್ನು (ಬಾಡಿ ಡಬಲ್) ಬಳಸಿಕೊಂಡಿದ್ದು ಇದೆ. ಆಗಾಗ ಕಾಣಿಸಿಕೊಂಡು ಒಂದು enigma ಎಂಬಂತೆ ವಿಜಯ್ ತಮ್ಮನ್ನ ತಾವು ಬಿಂಬಿಸಿಕೊಂಡರು. ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದು ಜನಸೇವೆಗೆ ಧುಮುಕಿದ್ದೇನೆ ಎಂದು ಸಾರಿದರು. ವಿಜಯ್ ತೊಟ್ಟ ಬಿಳಿ ಅಂಗಿ, ಖಾಕಿ ಪ್ಯಾಂಟು ಅವರ ಅಭಿಮಾನಿ ಮತ್ತು ಪ್ರಚಾರಕರ ಸಮವಸ್ತ್ರವಾಯಿತು. ಹಲವು ಕಡೆ ಪ್ರಚಾರ ಪರದೆಗಳನ್ನು (ಹಾಲೋಗ್ರಾಮ್) ಉಪಯೋಗಿಸಿ ಜನರನ್ನು ತಲುಪಿದರು. ಟಿವಿಕೆ ಪಾರ್ಟಿಯ ಚಿಹ್ನೆಯಾದ ಸೀಟಿ (whistle) ಅನ್ನು ಯುವಕರು ತಮ್ಮ ತಂದೆ, ತಾಯಿ, ಸಂಬಂಧಿಗಳ ಕಿವಿಯಲ್ಲಿ ಊದುವಂತೆ ಕರೆಕೊಟ್ಟರು. ಈ ಬಾರಿ ತಮಿಳುನಾಡಿನಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರು ಶೇಕಡಾ 12.5ರಷ್ಟು ಅಂದರೆ ಸುಮಾರು 1.2 ಕೋಟಿಯಷ್ಟು ಮಂದಿ, ಇವರೆಲ್ಲಾ ಯುವಕರು ಎಂದರೆ ಸರಿ ಹೋದಿತು. ಟಿವಿಕೆಗೆ ಇದು ಕೂಡ ವರದಾನವಾಯಿತು.

ವಿಜಯ್ ತಮಿಳರ ನಾಡಿಮಿಡಿತ ಅರಿತವರು. ವೇದಿಕೆ ಮೇಲೆ ಅವರು ಭಾಷಣ ಮಾಡುವಾಗ ಅವರ ಹಿಂದೆ ಪೆರಿಯಾರ್, ಕಾಮರಾಜು, ಬಾಬಾ ಸಾಹೇಬ್ ಅಂಬೇಡ್ಕರ್, ವೇಲು ನಾಚ್ಚಿಯಾರ್, ಅಂಜಲೈ ಅಮ್ಮಲ್ ಚಿತ್ರಗಳು ರಾರಾಜಿಸುತ್ತಿರುತ್ತವೆ. "ಹುಟ್ಟುವಾಗ ನಾವೆಲ್ಲರೂ ಸಮಾನರು" ಎಂಬ ತಿರುಕ್ಕುರಳ್ ವಾಕ್ಯ ಇವರ ರಾಜಕೀಯ ಸಿದ್ಧಾಂತದ ಮೂಲ. ಅವರ ಇಷ್ಟು ವರುಷದ ತಯಾರಿ, ಪೊಸಿಷನಿಂಗ್, ಸೋಶಿಯಲ್ ವರ್ಕ್ ಎಲ್ಲವೂ ಫಲ ನೀಡಿದೆ. ಅದು ಬಂಪರ್ ಫಲ. ಬೇಸಾಯ ಶುರು ಮಾಡಿದ ರೈತನಿಗೆ ಮೊದಲ ಬೆಳೆ ಬಂಪರ್ ಬೆಳೆಯಾಗುವುದು ಬಹಳ ವಿರಳ, ಆದರೆ ಅಂತಹದೊಂದು ಅನಿರೀಕ್ಷಿತ ಬೆಳೆ ವಿಜಯ್ ಕೈ ಹಿಡಿದಿದೆ. ಮೇಲ್ನೋಟಕ್ಕೆ ಕಣಜ ತುಂಬಿದಂತೆ ಕಾಣುತ್ತಿದೆ. ಕಣಜ ಇನ್ನೈದು ವರ್ಷ ತಮಿಳುನಾಡಿನ ಜನರನ್ನು ಸಲಹುತ್ತದೆ ಎಂಬ ನಂಬಿಕೆ ಎಲ್ಲರಲ್ಲಿದೆ.

2021ರಲ್ಲಿ ತೆರೆಕಂಡ ʼಮಾಸ್ಟರ್ʼ ಚಿತ್ರದಲ್ಲಿ, ವಿಜಯ್ (ಜೆಡಿ) ಒಬ್ಬ ಶಿಕ್ಷಕ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಆದರೆ ಸದಾ ಕುಡಿತದ ಅಮಲಿನಲ್ಲೇ ಇರುವವ ಅವ. ಮುಂದುವರೆದು ಭವಾನಿ ಎಂಬ ಬಾಲಾಪರಾಧಿ, ವಿಕೃತ ಡ್ರಗ್ ಲಾರ್ಡ್ ಮತ್ತು ರಕ್ತದಾಯಿ ರಕ್ಕಸನನ್ನು ಎದಿರುಹಾಕಿಕೊಂಡು ಕುಡಿತ, ನಶೆ ತ್ಯಜಿಸಿ ತನ್ನ ಸರ್ವವನ್ನು ಪಣಕ್ಕಿಟ್ಟು ಬಾಲಾಪರಾಧಿಗಳ ಒಳಿತಿಗಾಗಿ ಶ್ರಮಿಸುವ ನಾಯಕನ ಕಥೆಯದು. ತೀರಾ unconventional ಆದ ಶಿಕ್ಷಕನ ಪಾತ್ರವದು. ತನ್ನೆಲ್ಲಾ vulnerability, ವ್ಯಸನಗಳ ಹೊರತಾಗಿಯೂ ಆತ ಯಶಸ್ವಿ ಶಿಕ್ಷಕನಾಗಿ, ನಿಜವಾದ ಮಾಸ್ಟರಾಗಿ ವ್ಯವಸ್ಥೆಯನ್ನು ತಿದ್ದುತ್ತಾನೆ. ಅಂತಹದೇ ನಾಯಕನಿಗಾಗಿ ತಮಿಳುನಾಡಿನ ಜನರು ಕಾಯುತ್ತಿರಬಹುದು. ಅವರಿಗೆ ಪರ್ಫೆಕ್ಟ್ ಆದ, ನಿಷ್ಕಳಂಕನೆಂದು ಬಿಂಬಿಸಿಕೊಳ್ಳುವ, ಸರ್ವಶಕ್ತ ಲೋಕ ಗುರು ಬೇಕಿಲ್ಲ. They want somebody vulnerable yet strong, extremely capable but common and one among them to lead. ವಿಜಯ್ ಅವರಿರಬಹುದೇ? ಕಾದು ನೋಡುವ...

ಬರಹ:ಹರೀಶ್ ಗಂಗಾಧರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+