ರಾಜಕೀಯ ನಿವೃತ್ತಿ ಘೋಷಿಸಿದ ಚಂದ್ರಕಾಂತ ಬೆಲ್ಲದ್

ತಮ್ಮ ತವರು ಕ್ಷೇತ್ರ ಧಾರವಾಡದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಚಂದ್ರಕಾತ ಬೆಲ್ಲದ್, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬೇಸರ ಮೂಡಿಸಿವೆ. ಆದ್ದರಿಂದ ರಾಜಕೀಯ ನಿವೃತ್ತಿ ಪಡೆದು ಸಂಘ ಸಂಸ್ಥೆಗಳೊಂದಿಗೆ ಸೇರಿ ಸಮಾಜ ಸೇವೆ ಮಾಡುವುದಾಗಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬೆಲ್ಲದ್ ಕೆಜೆಪಿಗೆ ಹೋಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಬಿಜೆಪಿ ಬಿಡುವ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದ ಬೆಲ್ಲದ್ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಾನು ಮುಂದಿನ ಚುನಾವಣೆಗೆ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದಿ.ಎಸ್.ನಿಜಲಿಂಗಪ್ಪ ಅವರಿಂದ ಪ್ರೇರಿತವಾಗಿ ರಾಜಕೀಯಕ್ಕೆ ಧುಮುಕಿದ್ದ ಬೆಲ್ಲದ್ 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಶಾಂತ ಸ್ವಭಾವ, ಪ್ರಾಮಾಣಿಕತೆ, ಸರಳ ನಡವಳಿಕೆ ಮುಂತಾದವುಗಳ ಮೂಲಕ ಬೆಲ್ಲದ್ ಜನರ ವಿಶ್ವಾಸಗಳಿಸಿದ್ದರು.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗುವ ಅವಕಾಶ ತಪ್ಪಿಸಿಕೊಂಡ ಬೆಲ್ಲದ್ ನಂತರ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಪಕ್ಕದ ಕ್ಷೇತ್ರದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗಲೂ ಬೆಲ್ಲದ್ ಅವರಿಗೆ ಸಚಿವ ಹುದ್ದೆ ಕೈ ತಪ್ಪಿ ಹೋಗಿತ್ತು.
ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಬೆಲ್ಲದ್ ಅವರ ವಿರುದ್ಧ ಆರೋಪ ಮಾಡಿ, ಬೀದರ್ ನಲ್ಲಿ 2010ರಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬೆಲ್ಲದ್ ಅವರ ಮುಖಕ್ಕೆ ಕನ್ನಡ ಸಂಘಟನೆಗಳ ಕೆಲವು ಕಾರ್ಯಕರ್ತರು ಮಸಿ ಬಳಿದಿದ್ದರು. ಘಟನೆಯಿಂದ ನೋವಾಗಿದೆ ಯಾರ ವಿರುದ್ಧವೂ ದೂರು ನೀಡುವುದಿಲ್ಲವೆಂದು ಹೇಳಿಕೆ ನೀಡಿ ಬೆಲ್ಲದ್ ಸಜ್ಜನಿಕೆ ಮೆರೆದಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications