CBSE 12ನೇ ತರಗತಿ ಫಲಿತಾಂಶ 2026 ಬಿಡುಗಡೆಗೆ ಕ್ಷಣಗಣನೆ: ನಿಮ್ಮ ರಿಸಲ್ಟ್ ಹಾಗೂ ಅಂಕಪಟ್ಟಿ ಮೊಬೈಲ್‌ನಲ್ಲೇ ಚೆಕ್ ಮಾಡುವುದು ಹೇಗೆ?
ನವದೆಹಲಿ: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತರದಿಂದ ಕಾಯುತ್ತಿರುವ ಸಿಬಿಎಸ್‌ಇ (CBSE) 12ನೇ ತರಗತಿ ಫಲಿತಾಂಶ 2026 ಶೀಘ್ರದಲ್ಲೇ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಈ ಬಾರಿ ಬೋರ್ಡ್ ಪರೀಕ್ಷೆ ಬರೆದಿರುವ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶೈಕ್ಷಣಿಕ ಅವಕಾಶಗಳು ಮತ್ತು ಕಾಲೇಜು ಪ್ರವೇಶಾತಿಯನ್ನು ನಿರ್ಧರಿಸುವ ಈ ಮಹತ್ವದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಸಿಬಿಎಸ್‌ಇ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಸುಗಮವಾಗಿ ಹಾಗೂ ಅಂತಿಮ ಹಂತದಲ್ಲಿ ಸಾಗುತ್ತಿದ್ದು, ಅತೀ ಶೀಘ್ರದಲ್ಲಿಯೇ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುವುದು.

ಒಮ್ಮೆ ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್, ಶಾಲೆಯ ಸಂಖ್ಯೆ, ಅಡ್ಮಿಟ್ ಕಾರ್ಡ್ ಐಡಿ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಆನ್‌ಲೈನ್‌ನಲ್ಲಿ ಅಂಕಪಟ್ಟಿಯನ್ನು ಪಡೆಯಬಹುದಾಗಿದೆ.
ಫಲಿತಾಂಶ ಪ್ರಕಟವಾದ ದಿನ ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಹೆಚ್ಚಾಗಿ ಸರ್ವರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿಳಂಬವನ್ನು ತಪ್ಪಿಸಲು ವಿದ್ಯಾರ್ಥಿಗಳು ಡಿಜಿಲಾಕರ್ ಮತ್ತು ಉಮಂಗ್ (UMANG) ಆ್ಯಪ್‌ಗಳ ಮೂಲಕವೂ ಡಿಜಿಟಲ್ ಅಂಕಪಟ್ಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ತಪ್ಪು ಮಾಹಿತಿಗಳಿಂದ ದೂರವಿರಲು ಕೇವಲ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗಳಾದ cbse.gov.in, results.cbse.nic.in ಮತ್ತು cbse.nic.in ಗಳಿಗೆ ಮಾತ್ರ ಭೇಟಿ ನೀಡುವಂತೆ ಸೂಚಿಸಲಾಗಿದೆ.
ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅಂಕಪಟ್ಟಿಯು ತಾತ್ಕಾಲಿಕವಾಗಿದ್ದು, ಮೂಲ ಪ್ರಮಾಣಪತ್ರಗಳನ್ನು ನಂತರ ಆಯಾ ಶಾಲೆಗಳ ಮೂಲಕ ವಿತರಿಸಲಾಗುತ್ತದೆ. ಆದರೆ ಡಿಜಿಟಲ್ ಪ್ರತಿಯು ಕಾಲೇಜು ಪ್ರವೇಶ ಮತ್ತು ಇತರೆ ಅಧಿಕೃತ ಉದ್ದೇಶಗಳಿಗೆ ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ.
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಚೆಕ್ ಮಾಡುವುದು ಹೇಗೆ?
1. ಕೇಂದ್ರಿಯ ಫ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
2. ಮುಖಪುಟದಲ್ಲಿ ಕಾಣುವ "CBSE Class 12 Result 2026" ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ನಿಮ್ಮ ರೋಲ್ ನಂಬರ್, ಸ್ಕೂಲ್ ನಂಬರ್, ಅಡ್ಮಿಟ್ ಕಾರ್ಡ್ ಐಡಿ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
4. ವಿವರಗಳನ್ನು ಭರ್ತಿ ಮಾಡಿದ ಬಳಿಕ 'Submit' ಬಟನ್ ಒತ್ತಿ.
5. ನಿಮ್ಮ ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುತ್ತದೆ.
6. ಭವಿಷ್ಯದ ಉಲ್ಲೇಖಕ್ಕಾಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಕಳೆದ 2025ರ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದಲ್ಲಿ, ಬಾಲಕಿಯರು ಶೇಕಡಾ 91.52 ರಷ್ಟು ಉತ್ತೀರ್ಣರಾಗುವ ಮೂಲಕ ಬಾಲಕರಿಗಿಂತ (ಶೇ. 85.12) ಮೇಲುಗೈ ಸಾಧಿಸಿದ್ದರು. ತೃತೀಯ ಲಿಂಗಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 77.50 ರಷ್ಟಿತ್ತು.
ಫಲಿತಾಂಶದ ಜೊತೆಗೆ, ಉತ್ತೀರ್ಣರ ಪ್ರಮಾಣ, ಟಾಪರ್‌ಗಳ ಮಾಹಿತಿ ಮತ್ತು ಪ್ರಾದೇಶಿಕ ಸಾಧನೆಯ ದತ್ತಾಂಶವನ್ನು ಸಹ ಸಿಬಿಎಸ್‌ಇ ಪ್ರಕಟಿಸುವ ಸಾಧ್ಯತೆಯಿದೆ. ತಮ್ಮ ಅಂಕಗಳ ಬಗ್ಗೆ ಅಸಮಾಧಾನ ಹೊಂದಿರುವ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾದ ನಂತರ ಅಂಕಗಳ ಮರುಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯು ಅವಕಾಶ ನೀಡಲಿದೆ. ವಿದ್ಯಾರ್ಥಿಗಳು ನಿಖರವಾದ ಅಪ್‌ಡೇಟ್‌ಗಳಿಗಾಗಿ ಅಧಿಕೃತ ವೇದಿಕೆಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.












Click it and Unblock the Notifications