PUC: ಬೆಂಗಳೂರನಲ್ಲಿ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ 35000 ರೂ. ಪ್ರೋತ್ಸಾಹ ಧನ
PUC: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 35000 ರೂ. ಪ್ರೋತ್ಸಾಹ ಧನ ಸಹಾಯ ನೀಡಲಾಗುತ್ತಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ 35000 ರೂ. ಪ್ರೋತ್ಸಾಹ ಧನ ಸಹಾಯ ಮಾಡಿರುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್ ರಮೇಶ್ ಅವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ (BSCC) ವ್ಯಾಪ್ತಿಯಲ್ಲಿ ಪಾಲಿಕೆಯ ಉತ್ತರಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ 85ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿಧ್ಯಾರ್ಥಿಗಳಿಗೆ ಬುಧವಾರ ಜಯನಗರದಲ್ಲಿರುವ ಸಭಾಂಗಣದಲ್ಲಿ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಧಕ ವಿದ್ಯಾರ್ಥಿಗಳಿಗೆ 35000 ರೂಪಾಯಿ ನಗದು ಪುರಸ್ಕಾರ
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿರುವ ಪಾಲಿಕೆ ವ್ಯಾಪ್ತಿಯ ಏಕೈಕ ಪದವಿ ಪೂರ್ವ ಕಾಲೇಜು ಆಗಿರುವ ಉತ್ತರಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಂಟು ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರೋತ್ಸಾಹ ರೂಪದಲ್ಲಿ ತಲಾ 35,000 ರೂ,ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸನ್ಮಾನಿತರ ವಿವರ
ಸನ್ಮಾನಿತರ ಪಟ್ಟಿಯಲ್ಲಿ ವಾಣಿಜ್ಯ ವಿಭಾಗದ ಪ್ರತೀಕ್ ಪಿ. (585 ಅಂಕ, 97.50%) ಅವರು 05 ಪಾಲಿಕೆಯ ಕಾಲೇಜುಗಳಲ್ಲೇ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಉಳಿದಂತೆ ಕಲಾ ವಿಭಾಗದಲ್ಲಿ ಈರೇಶ್ ಎಸ್. (92.33%) ಮತ್ತು ವೀಣಾ ವಿ. (87.83%), ವಾಣಿಜ್ಯ ವಿಭಾಗದಲ್ಲಿ ಪ್ರೀತಿ ವಿ.ಎಸ್. (91.83%), ವಿವೇಕ್ (88.16%), ನಂದಿತಾ ಕೆ. (88%), ತೇಜಸ್ ಎಂ.ಪಿ. (87.33%) ಹಾಗೂ ವಿಜ್ಞಾನ ವಿಭಾಗದಲ್ಲಿ ಮಂಜುನಾಥ ಭಂಗಿ (88.83%) ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸರಸ್ವತಿ ನಾಯಕ್ ಅವರು, 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿನ ಒಟ್ಟು 134 ವಿದ್ಯಾರ್ಥಿಗಳಲ್ಲಿ 99 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ಅವರ ಸಾಧನೆ ಅಪಾರ ಎಂದು ಶ್ಲಾಘಿಸಿದರು. ಅಲ್ಲದೆ ಇಂದಿನ ದಿನಗಳಲ್ಲಿಯೂ ಸಹ ಅನೇಕ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೊರೆದು ಪಾಲಿಕೆಯ ಕಾಲೇಜಿಗೆ ಸೇರಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಸಂತಸಪಟ್ಟರು.
ಮಾಜಿ ರಾಷ್ಟ್ರಪತಿ ಕೆ. ಆರ್.ನಾರಾಯಣ್ ಅವರ ಜೀವನವೇ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಪಾಲಿಕೆ ಆಯುಕ್ತರಾದ ಕೆ.ಎನ್ ರಮೇಶ್ ಅವರು ಹೇಳಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡತನದ ನಡುವೆಯೂ ಶಿಕ್ಷಣ ಪಡೆದು ದೇಶದ ಉನ್ನತ ಸ್ಥಾನಕ್ಕೇರಿದ ಭಾರತದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣ್ ಅವರ ಜೀವನ ಚರಿತ್ರೆಯನ್ನು ನೆನಪಿಸಿ ಸ್ಫೂರ್ತಿ ತುಂಬಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪಾಲಿಕೆಯು ಸದಾ ಬೆನ್ನೆಲುಬಾಗಿ ನಿಲ್ಲಲಿದ್ದು, ಕಾಲೇಜಿಗೆ ಅಗತ್ಯವಿರುವ ಯಾವುದೇ ನೆರವು ನೀಡಲು ಪಾಲಿಕೆ ಸಿದ್ಧವಿದೆ ಎಂದು ಭರವಸೆ ನೀಡಿದರು.
ಪೋಷಕರ ಪ್ರತಿಕ್ರಿಯೆ
ಇದೇ ವೇಳೆ ಪೋಷಕರೊಬ್ಬರು ಮಾತನಾಡಿ, ಖಾಸಗಿ ಕಾಲೇಜುಗಳ ರೀತಿಯಲ್ಲಿ ಒತ್ತಡವಿಲ್ಲದ ಹಾಗೂ ಹೆಚ್ಚು ಹೊರೆಯನಿಸದ ಮುಕ್ತ ಕಲಿಕಾ ವಾತಾವರಣವು ಪಾಲಿಕೆಯ ಕಾಲೇಜಿನಲ್ಲಿ ಇರುವುದರಿಂದಲೇ ಇಲ್ಲಿಯ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯಲು ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು ಹಾಗೂ ರಾಚಪ್ಪ, ಜಂಟಿ ಆಯುಕ್ತರಾದ ಡಾ. ಮಧು ಮತ್ತು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ವೆಂಕಟಕೃಷ್ಣಪ್ಪ ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications