ವಿಧಾನಸಭಾ ಚುನಾವಣೆ ಮತ್ತು ಮಾಜಿ ಸಿಎಂಗಳ ಮಕ್ಕಳು

ಬೆಂಗಳೂರು, ಮಾ 25: ಭಾರತದ ರಾಜಕಾರಣ ಮತ್ತು ಕುಟುಂಬ ರಾಜಕಾರಣಕ್ಕೆ ಎಲ್ಲಿಲ್ಲದ ನಂಟು. ಇದಕ್ಕೆ ಯಾವುದೇ ರಾಜಕೀಯ ಪಕ್ಷಗಳು ಹೊರತಾಗಿಲ್ಲ. ಇದು ಒಂದು ರೀತಿಯಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ವಂಶಪಾರಂಪರ್ಯ ರಾಜಕೀಯದ ದ್ಯೋತಕವಾಗಿ ತಮ್ಮ ತಮ್ಮ ಕರುಳಿನ ಕುಡಿಗಳನ್ನು ರಾಜಕೀಯ ನೆಲೆಗಟ್ಟಿನಲ್ಲಿ ಸುಭದ್ರಗೊಳಿಸುವ ಪ್ರಯತ್ನ ಕೆಲವು ರಾಜಕಾರಿಣಿಗಳಿಂದ ನಡೆಯುತ್ತಲೇ ಬಂದಿದೆ. ಇದು ಬರೀ ಕರ್ನಾಟಕದ ಸಮಸ್ಯೆಯಲ್ಲ, ಇಡೀ ದೇಶದ ಸಮಸ್ಯೆ.

ಗೆಲ್ಲುವ ಕುದುರೆ ಮೇಲೆ ಬಾಜಿ ಕೊಟ್ಟುವುದು ವಾಡಿಕೆ. ಹಾಗಾಗಿ ಈ ಬಾರಿ ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟಿಗೆ ಇತರ ಪಕ್ಷಗಳಿಗಿಂತ ಬೇಡಿಕೆ ಸ್ವಲ್ಪ ಜಾಸ್ತಿ. ಪ್ರಮುಖ ಪಕ್ಷಗಳು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸುವ ಮುನ್ನ ಪರಿಗಣಿಸುವ ಅಂಶ ಎಂಥದ್ದೇ ಇರಲಿ, ಕೊನೆಗೆ influential candiddate ಕ್ಷೇತ್ರದ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಾನೆ.

ಚುನಾವಣೆಯ ಈ ಹೊಸ್ತಿಲಲ್ಲಿ ಕರ್ನಾಟಕ ಇದುವರೆಗೆ ಕಂಡ ಮುಖ್ಯಮಂತ್ರಿಗಳ ಮಕ್ಕಳ ನಿಲುವೇನು? ರಾಜಕೀಯದಲ್ಲಿ ಅವರು ಆಸಕ್ತಿ ಹೊಂದಿದ್ದಾರೋ, ತಟಸ್ಥರಾಗಿದ್ದಾರೋ? ರಾಜಕೀಯ ಎನ್ನುವುದು ಕಳೆದ ಪೀಳಿಗೆಗೇ ಸಾಕು ಎನ್ನುತ್ತಿದ್ದಾರೋ ಅಥವಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೋ?

ಮಾಜಿ ಸಿಎಂ ಮಕ್ಕಳ ನಿಲುವೇನು? ಸಂಭಾವ್ಯ ಕ್ಷೇತ್ರಗಳಾವುವು?

ಕೈಲಾಸನಾಥ್ ಪಾಟೀಲ್

ಕೈಲಾಸನಾಥ್ ಪಾಟೀಲ್

ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಪುತ್ರ ಕೈಲಾಸ ಪಾಟೀಲ್ ಲಿಂಗಾಯತ ಸಮುದಾಯದವರು. ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಒತ್ತಡ ಬರುತ್ತಿದೆ. 1994, 1999 ಮತ್ತು 2004ರಲ್ಲಿ ಚಿಂಚೋಳಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಇವರು ಈ ಬಾರಿ ಕ್ಷೇತ್ರ ಬದಲಾವಣೆ ಬಯಸಿದ್ದಾರೆ.

ಚಿತ್ರದಲ್ಲಿ: ಮಾಜಿ ಸಿಎಂ ವೀರೇಂದ್ರ ಪಾಟೀಲ್

ಚಂದ್ರಪ್ರಭಾ ಅರಸು

ಚಂದ್ರಪ್ರಭಾ ಅರಸು

ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸು ಪುತ್ರಿ ಚಂದ್ರಪ್ರಭಾ ಅರಸು 1991ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಿರಾಸಕ್ತರಾಗಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆಯಿದೆ.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಪುತ್ರ ದಿನೇಶ್ ಯುವ ಕಾಂಗ್ರೆಸ್ ಮುಖಂಡರು ಮತ್ತು ಬೆಂಗಳೂರು ಗಾಂಧಿನಗರ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು. ಬ್ರಾಹ್ಮಣ ಸಮುದಾಯದವರಾದ ಇವರು ಪಕ್ಷದ ಪ್ರಭಾವಿ ಮುಖಂಡರಲ್ಲಿ ಒಬ್ಬರು. ಇವರಿಗೆ ಗಾಂಧಿನಗರದ ಟಿಕೆಟ್ ಖಾಯಂ ಎಂದು ಹೇಳಲಾಗುತ್ತಿದೆ.

ಭರತ್ ಹೆಗಡೆ, ಸಮತಾ, ಮಮತ ನಿಚಾನಿ

ಭರತ್ ಹೆಗಡೆ, ಸಮತಾ, ಮಮತ ನಿಚಾನಿ

ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ಮಕ್ಕಳಾಗಿರುವ ಈ ಮೂವರು ಬೇರೆ ಬೇರೆ ಪಕ್ಷಗಳ ಜೊತೆಗೆ ಈ ಹಿಂದೆ ಗುರುತಿಸಿ ಕೊಂಡಿದ್ದರೂ ಈ ಚುನಾವಣೆಯಲ್ಲಿ ಇವರ ಹೆಜ್ಜೆ ಗುರುತುಗಳು ಕಾಣ ಸಿಗುವುದು ಅನುಮಾನ. ಈ ಹಿಂದೆ ಮಮತಾ ನಿಚಾನಿ ರಾಮನಗರ ಕ್ಷೇತ್ರದಲ್ಲಿ ಲಿಂಗಪ್ಪ ವಿರುದ್ದ ಸೋಲು ಅನುಭವಿಸಿದ್ದರು.
ಚಿತ್ರದಲ್ಲಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ

ಶಾಂಭವಿ, ಮಾಳವಿಕಾ

ಶಾಂಭವಿ, ಮಾಳವಿಕಾ

ಮಾಜಿ ಮುಖ್ಯಮಂತ್ರಿ, ವಿದೇಶಾಂಗ ಸಚಿವ, ಮಹಾರಾಷ್ಟ್ರದ ರಾಜ್ಯಪಾಲ ಎಸ್ ಎಂ ಕೃಷ್ಣ ಅವರು ಪುತ್ರಿಯರಾಗಿರುವ ಇವರು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಶಾಂಭವಿ ಕೊನೇ ಕ್ಷಣದಲ್ಲಿ ಹಿಂದೆ ಸರಿದಿದ್ದರು.
ಚಿತ್ರದಲ್ಲಿ: ಮಾಜಿ ಸಿಎಂ ಎಸ್ ಎಂ ಕೃಷ್ಣ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಎರಡು ಬಾರಿ ಜೆಡಿಎಸ್ ಟಿಕೆಟಿನಿಂದ ಗೆದ್ದು ಈಗ ಬಿಜೆಪಿಯಿಂದ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಡಿಯೂರಪ್ಪ ಆಪ್ತ ಬಣದಲ್ಲಿ ಕಾಣಿಸಿಕೊಂಡಿರುವ ಬೊಮ್ಮಾಯಿ ಅವರ ಒಲವು ಕೆಜೆಪಿ ಕಡೆಗೋ ಬಿಜೆಪಿ ಕಡೆಗೋ ಇನ್ನೂ ಸ್ಪಷ್ಟ ವಾಗಿಲ್ಲ. ಅವರು ಸ್ಪರ್ಧಿಸುವುದಂತೂ ಖಾತ್ರಿ. ಕ್ಷೇತ್ರ ಶಿಗ್ಗಾಂವ್ (ಹಾವೇರಿ ಜಿಲ್ಲೆ).

ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ

ಸಾರೇಕೊಪ್ಪ ಬಂಗಾರಪ್ಪ ಅವರ ಪುತ್ರ ನಟ ಮತ್ತು ರಾಜಕಾರಣಿ ಕುಮಾರ್ ಬಂಗಾರಪ್ಪ ತಂದೆಯ ಜೀವಿತ ಅವಧಿಯಲ್ಲೇ ಅವರಿಂದ ದೂರ ಸರಿದು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಎಸ್ ಎಂ ಕೃಷ್ಣ ಸರಕಾರದಲ್ಲಿ ಸಚಿವರಾಗಿದ್ದರು. ಸೊರಬ (ಶಿವಮೊಗ್ಗ ಜಿಲ್ಲೆ) ಅವರ ಸ್ವಕ್ಷೇತ್ರ. ಟಿಕೆಟಿಗೆ ತಯಾರಿಗಳು ನಡೆಯುತ್ತಿವೆ.

ಮಧು ಬಂಗಾರಪ್ಪ

ಮಧು ಬಂಗಾರಪ್ಪ

ಸಾರೇಕೊಪ್ಪ ಬಂಗಾರಪ್ಪ ಅವರ ಎರಡನೇ ಪುತ್ರ ನಟ ಮತ್ತು ರಾಜಕಾರಣಿ ಮಧು ಬಂಗಾರಪ್ಪ ಅವರ ನಿಷ್ಠೆ ಜೆಡಿಎಸ್ ಪಕ್ಷಕ್ಕೆ. ಯುವ ಜೆಡಿಎಸ್ ಅಧ್ಯಕ್ಷರಾಗಿರುವ ಮಧು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಪಕ್ಷಕ್ಕೆ ಅಭೂತಪೂರ್ವ ಜಯ ತಂದುಕೊಟ್ಟಿದ್ದರು. ಇವರು ಬಹುತೇಕ ಸೊರಬ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಹರ್ಷ ಮೊಯ್ಲಿ

ಹರ್ಷ ಮೊಯ್ಲಿ

ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ರಾಜಕೀಯದಿಂದ ಬಲುದೂರ. ಉದ್ಯಮಿಯಾಗಿರುವ ಇವರು 2013 ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು.

ಎಚ್ ಡಿ ರೇವಣ್ಣ

ಎಚ್ ಡಿ ರೇವಣ್ಣ

ಎಚ್ ಡಿ ದೇವೇಗೌಡ ಅವರ ಹಿರಿಯ ಪುತ್ರ, ಜೆಡಿಎಸ್ ಮುಖಂಡ, ಮಾಜಿ ಸಚಿವ ರೇವಣ್ಣ ಹಾಸನ ಜಿಲ್ಲೆ ಹೊಳೇನರಸೀಪುರದಿಂದ ಕಣಕ್ಕಿಳಿಯಲಿದ್ದಾರೆ. ಅಲ್ಲಿ ಗೆಲುವುದಷ್ಟೇ ಅಲ್ಲ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಅವರ ಹೆಗಲ ಮೇಲಿದೆ.

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೋ ರಾಮನಗರದಿಂದ ಅಥವಾ ಉತ್ತರ ಕರ್ನಾಟಕದ ಯಾವುದಾದರು ಒಂದು ಕ್ಷೇತ್ರ ಆರಿಸಿಕೊಳ್ಳಬಹುದು.

ಮಹಿಮಾ ಪಟೇಲ್

ಮಹಿಮಾ ಪಟೇಲ್

ಮಾಜಿ ಸಿಎಂ ಜೆ ಚ್ ಪಟೇಲ್ ಅವರ ಮೂವರು ಪುತ್ರರಲ್ಲಿ ಒಬ್ಬರಾಗಿರುವ ಮಹಿಮಾ ಪಟೇಲ್ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ. ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎನ್ನುವ ಸುದ್ದಿಯಿದೆ.

ಡಾ. ಅಜಯ್ ಸಿಂಗ್

ಡಾ. ಅಜಯ್ ಸಿಂಗ್

ಮಾಜಿ ಸಿಎಂ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಕಾಂಗ್ರೆಸ್ ಟಿಕೆಟಿನಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ತಂದೆಗೆ ಎಂಟು ಬಾರಿ ಒಲಿದಿದ್ದ ಈ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಲು ಮುಂದಾಗಿದ್ದಾರೆ. ಆದರೆ ಟಿಕೆಟ್ ಸಿಗುವ ಚಾನ್ಸಸ್ ಫಿಫ್ಟಿ.. ಫಿಫ್ಟಿ

ಬಿ ವೈ ರಾಘವೇಂದ್ರ

ಬಿ ವೈ ರಾಘವೇಂದ್ರ

ಮಾಜಿ ಬಿಜೆಪಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಪುತ್ರ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಸಂಸದ. ಬಿಜೆಪಿ ಸಂಸದರಾಗಿದ್ದರೂ ಕೆಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಆಪಾದನೆಗಳು ಇವರ ಮೇಲಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ ಎಸ್ ಈಶ್ವರಪ್ಪ ಅವರ ವಿರುದ್ದ ಸ್ಪರ್ಧೆಗೆ ಇಳಿಯುವ ಚಾನ್ಸ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+