ಕಾಂಗ್ರೆಸ್ : ಮಾ.30ರಂದು ಮೊದಲ ಪಟ್ಟಿ ಬಿಡುಗಡೆ

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಮಾ.30ರಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರುವ ಅನ್ಯ ಪಕ್ಷೀಯರ ಸೇರ್ಪಡೆ ಬಗ್ಗೆ, ಕೇಂದ್ರ ನಾಯಕರು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ವಲಸಿಗರ ಸೇರ್ಪಡೆ ನಂತರದ ಬೆಳವಣಿಗೆಗಳ ಬಗ್ಗೆ ನಾಯಕರು ಚರ್ಚೆ ನಡೆಸುತ್ತಿದ್ದೇವೆ. ರಾಜ್ಯದ ಹಿರಿಯ ನಾಯಕರೊಂದಿಗೆ ಸಭೆಯ ಬಳಿಕ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ನ ಮೂಲ ನಾಯಕರಿಗೆ ಆದ್ಯತೆ ನೀಡಲಾಗುವುದು. ಬೇರೆ ಪಕ್ಷದಿಂದ ವಲಸೆ ಬಂದ ಯಾವ ಶಾಸಕರಿಗೂ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದರು. ನಾಳೆಯ ಸಭೆಯ ಬಳಿಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ, ಮಾ.30ರಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ನಾಯಕರು ದೆಹಲಿಗೆ : ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಕೆಪಿಸಿಸಿ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರು ಸೇರಿದಂತೆ 25 ಜನ ರಾಜ್ಯದ ಪ್ರಮುಖ ನಾಯಕರು ಇಂದು ದೆಹಲಿ ತಲುಪಲಿದ್ದಾರೆ. ಮಂಗಳವಾರ ಟಿಕೆಟ್ ಹಂಚಿಕೆ ಕುರಿತಂತೆ ಕೇಂದ್ರ ಚುನಾವಣಾ ಸಮಿತಿ ಮುಖಂಡ ಲೂಸಿಯಾನೋ ಫೆಲೆರೊ ರಾಜ್ಯ ನಾಯಕರೊಂದಿಗೆ ಚರ್ಚಿಸಲಿದ್ದಾರೆ.
ರಾಜ್ಯದ ನಾಯಕರೊಂದಿಗೆ ಚರ್ಚಿಸಿದ ಬಳಿಕ ಮಾ.28ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿಯ ಅಂತಿಮ ಸಭೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಒಪ್ಪಿಗೆ ದೊರೆಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ರಾಜ್ಯದ ನಾಯಕರ ಒತ್ತಡಗಳಿದ್ದರೂ ಟಿಕೆಟ್ ನೀಡಿಕೆಯಲ್ಲಿ ಹೈ ಕಮಾಂಡ್ ನಾಯಕರ ತೀರ್ಮಾನವೇ ಅಂತಿಮ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications