ಭಗ್ನ ಪ್ರೇಮ: ಉಪನ್ಯಾಸಕಿಯ ಅಪಹರಿಸಿದ ವಿದ್ಯಾರ್ಥಿಗಳು

ಆರೋಪಿ ವಿದ್ಯಾರ್ಥಿಗಳು ಶಿಕ್ಷಕಿಯ ಮನೆಗೆ ನುಗ್ಗಿ, ಆಕೆಯ ಪೋಷಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ, ಅಪಹರಣ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಶಿಕ್ಷಕಿಯ ತಂದೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಒಬ್ಬ ವಿದ್ಯಾರ್ಥಿ ಮತ್ತು 24 ವರ್ಷದ ಶಿಕ್ಷಕಿ ಜಾಸ್ಮಿನ್ ಸುಜಿ ಮಧ್ಯೆ 6 ತಿಂಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಅವರ ಪೋಷಕರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಮಾರ್ಚ್ 8ರಂದು ಇಬ್ಬರೂ ಓಡಿಹೋಗಿದ್ದರು. ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಶಿಕ್ಷಕಿ ಜಾಸ್ಮಿನ್ ಮನೆಗೆ ಮರಳಿದ್ದರು. ಆದರೆ ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪ್ರತೀಕಾರವಾಗಿ ಶಿಕ್ಷಕಿಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಕ್ಕೂ ಮುನ್ನ ತನ್ನೊಂದಿಗೆ ಬರಲು ಪ್ರೇಮಿ ವಿದ್ಯಾರ್ಥಿ ಶಿಕ್ಷಕಿಗೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಆದರೆ ಆಕೆ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ 20 ವರ್ಷದ ಗೌತಂ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಈತ ನಾಗರಕೋಯಿಲ್ ನ ಇರೈಚಲಕುಲಂನಲ್ಲಿರುವ ಸನ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಆದರೆ ಈತನಿಗೆ ಸಹಕರಿಸಿದ ಇತರೆ ಮೂವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.












Click it and Unblock the Notifications