ರೈಲಿನಲ್ಲಿ ಶಾಸಕರ ಪತ್ನಿಗೆ ಲೈಂಗಿಕ ಕಿರುಕುಳ

ತಾನು ಹಾಲಿ ಶಾಸಕ ಎಂದು ಹೇಳಿದರೂ ರೈಲ್ವೆ ಸಿಬ್ಬಂದಿ ಮತ್ತು ರೈಲ್ವೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪ್ರಸಂಗವೂ ನಡೆದಿದೆ. ನಂತರ ದೂರು ದಾಖಲಿಸಿಕೊಂಡು, ಅಸಭ್ಯವಾಗಿ ವರ್ತಿಸಿದ ರೈಲ್ವೆ ಸಿಬ್ಬಂದಿಯ ವಿರುದ್ಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪಾಹೆಬ್ ರೈಲು ನಿಲ್ದಾಣದ ಸಮೀಪ ದನಾಪುರ- ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಬೆಳಗಿನ ಜಾವ ಬೋಜ್‌ಪುರ್ ಜಿಲ್ಲೆಯ ಅಗಿಯಾನ್ ಕ್ಷೇತ್ರದ ಬಿಜೆಪಿ ಶಾಸಕ ಶಿವೇಶ್ ಕುಮಾರ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು.
ಆಗ ಪಟ್ನಾ ನಿಲ್ದಾಣಕ್ಕೆ ಬಂದ ರೈಲಿನ ಎಸಿ ಬೋಗಿಗೆ ಹತ್ತಿದ 12 ಮಂದಿ ರೈಲ್ವೆ ಸಿಬ್ಬಂದಿಗಳು ಶಾಸಕರಿದ್ದ ಎದುರಿನ ಸೀಟಿನಲ್ಲಿ ಕುಳಿತು ಅಶ್ಲೀಲ ಶಬ್ದಗಳಿಂದ ಹರಟೆ ಹೊಡೆದು ಮದ್ಯ ಸೇವನೆ ಮಾಡಿದ್ದಲ್ಲದೆ, ಇದಕ್ಕೆ ಆಕ್ಷೇಪಿಸಿದ ಶಾಸಕರ ಮೇಲೆ ಹಲ್ಲೆ ಮಾಡಿ, ಅವರ ಪತ್ನಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ.
ಕೂಡಲೇ ಶಾಸಕರ ಪತ್ನಿಯು ಸಮಯ ಪ್ರಜ್ಞೆಯಿಂದ ಮಹಿಳಾ ಸಹಾಯವಾಣಿಗೆ ಕರೆ ಮಾಡಿದರು. ಶಿವೇಶ್ ಕುಮಾರ್ ಖುಸ್ರುಪುರ್ ರೈಲು ನಿಲ್ದಾನದ ಸಮೀಪ ತುರ್ತು ಸರಪಳಿಯನ್ನೂ ಎಳೆದರು. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು ಇಬ್ಬರು ಟಿಟಿಇಗಳನ್ನು ಬಂಧಿಸಿದ್ದಾರೆ. ಉಳಿದ 10 ಮಂದಿ ಪರಾರಿಯಾಗಿದ್ದಾರೆ. ಪಂಕಜ್ ಕುಮಾರ್ ಮತ್ತು ಅಜಯ್ ಬಂಧಿತರು.












Click it and Unblock the Notifications