ಈ ಐವರನ್ನು ಪಕ್ಷದಲ್ಲಿ ಉಳಿಸುಕೊಳ್ಳಲು ಬಿಜೆಪಿ ಹರಸಾಹಸ
ಬೆಂಗಳೂರು, ಫೆ 1 : ಸರಕಾರ ಬೀಳಿಸುವ ಕೆಲಸಕ್ಕೆ ನಾನು ಕೈಹಾಕಲ್ಲಾ, ಬಜೆಟ್ ಮಂಡನೆಗೆ ನನ್ನಿಂದ ಯಾವುದೇ ತೊಂದರೆ ಬರುವುದಿಲ್ಲವೆಂದು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಬಿಜೆಪಿಗೆ ಎಲ್ಲೋ ಅಸ್ಥಿರತೆ ಕಾಡುತ್ತಿರುವಂತಿದೆ.
ಬಿಜೆಪಿ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಮಾತಿಗೆ ಕಟಿಬಿದ್ದು 13 ಶಾಸಕರು ರಾಜೀನಾಮೆ ನೀಡಿ ಸರಕಾರಕ್ಕೆ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ನಮ್ಮದು ರಾಷ್ಟ್ರೀಯ ಪಕ್ಷ, ಎಂಥಹಾ ಪರಿಸ್ಥಿತಿ ಎದುರಿಸಲು ನಾವು ಸಿದ್ದ. ಸರಕಾರಕ್ಕೆ ಈಗಲೂ ಬಹುಮತ ಇದೆ. ರಾಜ್ಯಪಾಲರು ಆದೇಶಿಸಿದರೆ ಬಹುಮತ ಸಾಬೀತು ಪಡಿಸಲು ನಾವು ಸಿದ್ದ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದರೂ ತೆರೆಮೆರೆಯಲ್ಲಿ ಬಿಜೆಪಿ ತೊರೆದು ಕೆಜೆಪಿ ಸೇರುಲು ಸಿದ್ದತೆ ನಡೆಸುತ್ತಿರುವ ಶಾಸಕರನ್ನು ಮತ್ತು ಸಚಿವರ ಓಲೈಕೆಗೆ ಬಿಜೆಪಿ ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಒಂದು ಕಡೆ ಸರಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಬಿಜೆಪಿ, ಶಾಸಕರು ತಮ್ಮ ಮನವಿಗೆ ಸ್ಪಂದಿಸದಿದ್ದರೆ ವಿಧಾನಸಭೆ ವಿಸರ್ಜಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಬಿಜೆಪಿ ತೊರೆದು ಕೆಜೆಪಿ ಮತ್ತು ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಇಬ್ಬರು ಸಚಿವರು ಮತ್ತು ಮೂರು ಶಾಸಕರು ಯಾರ್ಯಾರು?

ಆನಂದ್ ಅಸ್ನೋಟಿಕರ್
ಕಾರವಾರ ಕ್ಷೇತ್ರದ ಶಾಸಕ ಮತ್ತು ಮೀನುಗಾರಿಕಾ, ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ. ಕಾರವಾರವನ್ನು ಗೋವಾಕ್ಕೆ ಸೇರಿಸಬೇಕೆಂದು ಈ ಹಿಂದೆ ಹೇಳಿಕೆ ನೀಡಿದ್ದ ಅಸ್ನೋಟಿಕರ್, ಜನಾರ್ಧನ ರೆಡ್ಡಿ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಆ ಪಾಳಯದಲ್ಲಿ ಗುರುತಿಸಿಕೊಂಡಿದ್ದವರು.

ರಾಜೂ ಗೌಡ
ರಾಜೂ ಗೌಡ ಆಲಿಯಾಸ್ ನರಸಿಂಹ ನಾಯಕ್ ಸುರಪುರ ಕ್ಷೇತ್ರದ ಶಾಸಕ. ಈ ಹಿಂದೆ ಭಿನ್ನಮತೀಯ ಕ್ಯಾಂಪಿನಲ್ಲಿದ್ದ ರಾಜೂ ಗೌಡ ಕಾಲಕ್ಕೆ ತಕ್ಕಂತೆ ತನ್ನ ನಿಷ್ಟೆಯನ್ನು ಬದಲಿಸಿದರು. ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಬಳಗದಲ್ಲಿರುವವರ ಪಟ್ಟಿಯಲ್ಲಿ ಇವರೂ ಒಬ್ಬರು.

ಶ್ರೀಶೈಲಪ್ಪ ಬಿದರೂರು
ಗದಗ ಕ್ಷೇತ್ರದ ಶಾಸಕ ಮತ್ತು ಯಡಿಯೂರಪ್ಪ ಆಪ್ತ ಬಣದಲ್ಲಿ ತೊಡಗಿಸಿಕೊಂಡಿದ್ದವರು.

ಪ್ರತಾಪ್ ಗೌಡ ಪಾಟೀಲ್
ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಶಾಸಕ. ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಷ್ಟೆಯನ್ನು ಇತ್ತೀಚಿನ ದಿನಗಳಲ್ಲಿ ತೋರುತ್ತಿದ್ದಾರೆ. ರಾಯಚೂರು ಶಕ್ತಿ ಭವನದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಜೊತೆ ಮಾತುಕತೆ ನಡೆಸಿದ್ದರು. ಒಂದು ಹಂತದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದರೆಂದು ಸುದ್ದಿಯಾಗಿತ್ತು.

ಡಿ ಎಸ್ ಸುರೇಶ್
ತರೀಕೆರೆ ಶಾಸಕ, ಇದೇ 23 ರಂದು 13 ಶಾಸಕರ ಪೈಕಿ ಇವರೂ ಬಿಜೆಪಿಗೆ ಟಾಟಾ ಬೈ ಅನ್ನಬೇಕಿತ್ತು. ಸದ್ಯ ಶಿರಡಿ ಟೆಂಪಲ್ ರೌಂಡ್ ಅಪ್ ನಲ್ಲಿದ್ದಾರೆ.


Click it and Unblock the Notifications
