42 ಜನರಿಂದ ಅತ್ಯಾಚಾರ : ಯುವತಿಗೆ ಸುಪ್ರೀಂ ಜಯ

1996ರಲ್ಲಿ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿ ಎಂಬಲ್ಲಿ 16 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಬಸ್ ಕಂಡಕ್ಟರ್ ಸೇರಿ 42 ದುರುಳರು ಆಕೆಯ ಮೇಲೆ ಸುಮಾರು 40 ದಿನಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಅನೇಕ ಪ್ರದೇಶಗಳಿಗೆ ಕರೆದೊಯ್ದು ಆಕೆಯ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದರು.
2000ರ ಸೆಪ್ಟೆಂಬರ್ 6ರಂದು ವಿಚಾರಣಾ ನ್ಯಾಯಾಲಯ 36 ಅತ್ಯಾಚಾರಿಗಳನ್ನು ದೋಷಿಗಳೆಂದು ತೀರ್ಪು ನೀಡಿ ಕಠಿಣ ಸಜೆಯನ್ನು ನೀಡಿತ್ತು. ಆದರೆ, ಕೇರಳ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ, 35 ಜನರನ್ನು ಖುಲಾಸೆಗೊಳಿಸತ್ತು. ಒಬ್ಬನನ್ನು ಮಾತ್ರ ದೋಷಿಯನ್ನಾಗಿ ಮಾಡಿ ತೀರ್ಪು ನೀಡಿತ್ತು. ದೋಷಿಗೆ 5 ವರ್ಷಗಳ ಸಜೆ ಹೈಕೋರ್ಟ್ ನೀಡಿತ್ತು.
ಬಾಲಕಿ ತಾನಾಗಿಯೇ ಈ ಕೃತ್ಯದಲ್ಲಿ ಸಹಕರಿಸಿದ್ದಳೆಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಸಂಗತಿಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬಾಲಕಿಯೇ ಅತ್ಯಾಚಾರವೆಸಗುವಾಗ ಸಹಕರಿಸಿದ್ದಳು ಎಂದು ಹೇಗೆ ತೀರ್ಮಾನಕ್ಕೆ ಬರಲಾಯಿತೆಂದು ಪ್ರಶ್ನಿಸಿದೆ. ಅಲ್ಲದೆ, ಪ್ರಾಸಿಕ್ಯೂಷನ್ ಒದಗಿಸಿದ್ದ ಸಾಕ್ಷಿಗಳನ್ನು ಹೈಕೋರ್ಟ್ ಸರಿಯಾಗಿ ಪರಿಗಣಿಸಿಲ್ಲ ಎಂದು ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಸುಪ್ರೀಂಕೋರ್ಟಿನಲ್ಲಿ ಕಳೆದ 7 ವರ್ಷಗಳಿಂದ ಕೊಳೆಯುತ್ತಿತ್ತು. ಕೇರಳ ಹೈಕೋರ್ಟಿನಲ್ಲಿ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬೇಕೆಂದು ಆರೋಪಿಗಳಿಗೆ ಸೂಚಿಸಲಾಗಿದೆ. 42 ಜನರಿಂದ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾದ ಯುವತಿಗೆ ಕಡೆಗೂ ನ್ಯಾಯ ಸಿಕ್ಕಂತಾಗಿದೆ.












Click it and Unblock the Notifications