'ತುಂಡು ಲಂಗ ತೊಟ್ರೆ ಅತ್ಯಾಚಾರವಾಗ್ದೆ ಇನ್ನೇನಾಗತ್ತೆ?'

"ನೀವು ಒಂದು ವೇಳೆ ಕಂಠಮಟ್ಟ ಕುಡಿದಿದ್ದರೆ, ಮೇಲೆ ತಿಳಿಸಿದಂತಹ ಪ್ರಚೋದನಾತ್ಮಕ ದಿರಿಸು ಧರಿಸಿದ್ದರೆ ಅತ್ಯಾಚಾರ ಮಾಡುವವರಿಂದ ಹೇಗೆ ತಪ್ಪಿಸಿಕೊಳ್ಳುತ್ತೀರಿ?" ಎಂದು ಕನ್ಸರ್ವೇಟಿವ್ ಪಕ್ಷಕ್ಕೆ ಸೇರಿದ ಗ್ಲೌಸೆಸ್ಟರ್‌ನ ಶಾಸಕ ರಿಚರ್ಡ್ ಗ್ರಹಾಂ ಅವರು ತಮ್ಮ ಬ್ಲಾಗಲ್ಲಿ ಈ ರೀತಿ ಬರೆದುಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅವರ ಹೇಳಿಕೆಗೆ ಎಲ್ಲ ವಲಯಗಳಿಂದ ಟೀಕೆಗಳು ಹರಿದುಬರುತ್ತಿವೆ. ಅತ್ಯಾಚಾರ ವಿರೋಧಿ ಸಂಘಟನೆಗಳು ಗ್ರಹಾಂ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅತ್ಯಾಚಾರಕ್ಕೆ ಒಳಗಾದವರು ಮೊದಲೇ ಮಾನಸಿಕವಾಗಿ ಜರ್ಜರಿತರಾಗಿರುತ್ತಾರೆ, ಅಂಥವರನ್ನು ಮತ್ತೆ ಈ ರೀತಿ ಟೀಕಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಆದರೆ, ಹೀಗೆ ಹೇಳಿರುವುದರಿಂದ ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಗ್ರಹಾಂ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ದಿ ಸಿಟಿಜನ್ ಪತ್ರಿಕೆ ವರದಿ ಮಾಡಿದೆ. ವಿವಾದದ ಬಿರುಗಾಳಿ ಎದ್ದನಂತರ ಗ್ರಹಾಂ ಅವರು ಯಾವುದೇ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.
ನಮ್ಮ ಭಾರತದಲ್ಲಿ ಇಂಥ ಹೇಳಿಕೆಗಳನ್ನು ಅನೇಕ 'ಮಹನೀಯರು' ಹೇಳಿದ್ದಾರೆ. ಕೆಲ ತಿಂಗಳ ಹಿಂದೆ ಬಾಬಾ ಆಸಾರಾಮ್ ಅವರು ಎರಡು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದರು. ನಂತರ ಆರೆಸ್ಸೆಸ್‌ನ ಮೋಹನ್ ಭಾಗವತ್ ಅವರು, ಪತ್ನಿ ಮನೆಯಲ್ಲೇ ಇದ್ದುಕೊಂಡು ಹೆಂಡತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಅತ್ಯಾಚಾರಗಳು ನಡೆಯುವುದಿಲ್ಲ ಎಂದಿದ್ದರು. ಮತ್ತೊಬ್ಬರು, ಮಹಿಳೆಯರು ಮೈಯನ್ನು ಪ್ರದರ್ಶಿಸದೆ ಸೀರೆ ಅಥವಾ ಚೂಡಿದಾರ್ ತೊಟ್ಟರೆ ಅತ್ಯಾಚಾರಗಳು ಹೇಗೆ ಆಗುತ್ತವೆ ಎಂದು ನುಡಿದಿದ್ದರು.
ಯಾವ ಮಹಿಳೆ ಎಂಥ ಬಟ್ಟೆ ತೊಡಬೇಕೆಂದು ಉಪದೇಶ ನೀಡಲು ನೀವ್ಯಾರು? ಮಿನಿ, ಮಿಡಿ ತೊಡುವುವುದರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿಲ್ಲ. ಗಂಡಸರು ಹೆಂಗಸರ ಬಗ್ಗೆ ತಮ್ಮ ಮನೋಭಾವ ಬದಲಿಸಿಕೊಂಡರೆ ಮಾತ್ರ ಅತ್ಯಾಚಾರಗಳಂಥ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಭಾರತದ ಆಧುನಿಕ ಮಹಿಳೆಯರು ಗರ್ಜಿಸಿದ್ದರು. [ಕೃಪೆ : ನಿಟಿ ಸೆಂಟ್ರಲ್]












Click it and Unblock the Notifications