ಡಕಾಯಿತರಿಂದ 18ರ ಯುವತಿಯ ಗ್ಯಾಂಗ್ ರೇಪ್

ಚಳಿಗಾಲದ ರಾಜಧಾನಿ ಎಂದು ಖ್ಯಾತವಾಗಿರುವ ನಾಗಪುರ ಗ್ರಾಮೀಣ ಜಿಲ್ಲೆಯ ಕುಹಿ ತಾಲೂಕಿನ ನವರಗಾಂವ್ ಹಳ್ಳಿಯಲ್ಲಿ ಶುಕ್ರವಾರ ರಾತ್ರಿ 8ರಿಂದ 10 ಗಂಟೆ ನಡುವಿನಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
25ರಿಂದ 30ರ ಹರೆಯದಲ್ಲಿದ್ದ 5ರಿಂದ 6 ಜನರಿದ್ದ ಡಕಾಯಿತರ ತಂಡ ನವರಗಾಂವ್ ಹಳ್ಳಿಯಲ್ಲಿದ್ದ ಗುಡಿಸಲುಗಳ ಮೇಲೆ ರಾತ್ರಿ ದಾಳಿ ಮಾಡಿದೆ. ಮೊದಲು ಗುಡಿಸಲ್ಲಿದ್ದ ಯುವತಿಯ ಕುಟುಂಬದವರನ್ನು ಥಳಿಸಿದೆ. ನಂತರ 18 ವರ್ಷ ವಯಸ್ಸಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ.
ಈ ಸಂಗತಿಯನ್ನು ನಾಗಪುರ ಗ್ರಾಮೀಣ ಸುಪರಿಂಟೆಂಡ್ ಆಫ್ ಪೊಲೀಸ್ ಮನೋಜ್ ಶರ್ಮಾ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದರು. ಡಕಾಯಿತರು ಪರ್ಧಿ ಜನಾಂಗದವರೆಂದು ಹೇಳಲಾಗಿದ್ದು, ಈ ಹಿಂದೆ ಕೂಡ ಅವರು ಡಕಾಯತಿ ನಡೆಸಿದ್ದರು. ಅವರನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಶರ್ಮಾ ನುಡಿದರು. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. (ಪಿಟಿಐ)












Click it and Unblock the Notifications