ಮಹಿಳೆ ಮೇಲಿನ ದೌರ್ಜನ್ಯ ಪ್ರತಿಭಟಿಸಿ ಜಾಗತಿಕ ನರ್ತನ

ಈ ಕಾರ್ಯಕ್ರಮದ ರೂವಾರಿ ಅಮೆರಿಕದ ಖ್ಯಾತ ನಾಟಕಕಾರ್ತಿ, ನಟಿ, ಮಹಿಳಾವಾದಿ, ಚಳವಳಿಗಾರ್ತಿ, ದಿ ವಜೈನಾ ಮೊನೊಲೋಗ್ ಎಂಬ ನಾಟಕ ಕರ್ತೃ ಈವ್ ಎನ್‌ಸ್ಲರ್. ಜ.14ರಂದು ಗುಜರಾತ್ ನಾಡಿನಾದ್ಯಂತ 20 ಸಾವಿರ ಕಲಾವಿದರು ನಾಟ್ಯ ಕಲಾವಿದೆ ಮಲ್ಲಿಕಾ ಸಾರಾಭಾಯ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈವ್ ಎನ್‌ಸ್ಲರ್ ಅಭಿನಯ ಮತ್ತು ಎಲಿಜಬೆತ್ ಸೊಂಬರ್ಟ್ ಅವರ ಪಿಯಾನೋ ಕಚೇರಿಯೂ ಇರಲಿದೆ.
'ಒನ್ ಬಿಲಿಯನ್ ರೈಸಿಂಗ್' ಅಭಿಯಾನದ ಬೆನ್ನೆಲುಬಾಗಿರುವ ಈವ್, ಈ ಪ್ರತಿಭಟನಾ ನರ್ತನ, ಚೈತನ್ಯ, ಸ್ವಾತಂತ್ರ್ಯ ಮತ್ತು ದೇಹದ ಸಾಂಸ್ಕೃತಿಕ ಅಭಿವ್ಯಕ್ತಿಯಾಗಲಿದೆ ಎಂದು ಹೇಳಿದ್ದಾರೆ. ಈ ಅಭಿಯಾನಕ್ಕೆ ಜಗತ್ತಿನ ಎಲ್ಲೆಡೆಯಿಂದ ಅನೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ನುಡಿದಿದ್ದಾರೆ.
ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ನಡೆದತಹ ಭೀಭತ್ಸ ಕೃತ್ಯ ಜಗತ್ತಿನ ಯಾವ ಭಾಗದಲ್ಲಿಯೂ ನಡೆದಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಡಿ.16ರಂದು ದೆಹಲಿಯಲ್ಲಿ 6 ಜನರಿಂದ ಅತ್ಯಾಚಾರಕ್ಕೊಳಗಾಗಿ, ದೈಹಿಕ ಹಲ್ಲೆಗೊಳಗಾಗಿ, ಅನೇಕ ದಿನಗಳ ಕಾಲ ಹೋರಾಡಿ ಆ ಯುವತಿ ಡಿ.31ರಂದು ಸಿಂಗಪುರದಲ್ಲಿ ಕೊನೆಯುಸಿರೆಳೆದಳು.
ಭಾರೀ ಸಂಖ್ಯೆಯಲ್ಲಿ ಯುವಕರು ಬೆಂಬಲಿಸುತ್ತಿರುವುದು ಹೋರಾಟಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಅವರು, ಹೆಣ್ಣನ್ನು ಕೀಳಾಗಿ ನೋಡುವ ಆಚರಣೆ, ಸಂಪ್ರದಾಯಗಳನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ ಕೈಬಿಡಬೇಕು ಎಂದು ಹೇಳಿದ್ದಾರೆ.












Click it and Unblock the Notifications