ದಲ್ಲಾಳಿಗೆ 28 ಸಾವಿರ ಕೋ. ರೂ ಷೇರು ಬಂದಿದ್ದು ಹೇಗೆ?

ಅಮೆರಿಕದ ಸರಕು ವಿನಿಮಯ ವ್ಯಾಪಾರ ಕೇಂದ್ರದ ಸದಸ್ಯನಾಗಿರುವ ಈ ಷೇರು ದಲ್ಲಾಳಿ ಬಳಿ 28,000 ಕೋಟಿ ರೂ. (ಅಂದರೆ 5 ಶತಕೋಟಿ ಡಾಲರ್) ಮೌಲ್ಯದ ಅಮೆರಿಕದ ಸರಕಾರಿ ಖಜಾನೆ ಬಾಂಡ್ ಸಿಕ್ಕಿವೆ. ಯಾವುದೇ ಭಾರತೀಯ ವ್ಯಕ್ತಿ ವಿದೇಶಗಳಲ್ಲಿ ವಾರ್ಷಿಕ ಗರಿಷ್ಠ 2 ಲಕ್ಷ ಡಾಲರ್ ಹೂಡಿಕೆ ಮಾಡಬಹುದು.
ಈತ ಮೂಲತಃ ಕೊಯಮತ್ತೂರಿನಿಂದ 80 ಕಿಮೀ ದೂರದಲ್ಲಿರುವ ಧರ್ಮಾಪುರದವನು. 45 ವರ್ಷದ ಟಿಎಂ ರಾಮಲಿಂಗಂ ಈತನ ಹೆಸರು. ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಖುದ್ದಾಗಿ ಈತನೇ ಈ ವಹಿವಾಟು ನಡೆಸುತ್ತಿದ್ದಾನಾ ಅಥವಾ ಯಾರಾದರೂ ಪ್ರಭಾವಿ ರಾಜಕಾರಣಿ/ಉದ್ಯಮಿ ಪರವಾಗಿ ಬೇನಾಮಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾನಾ? ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ರಾಮನಾಥಪುರಂನಲ್ಲಿ 600 ಎಕರೆ ಜಮೀನು ಖರೀದಿಸಿ, 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ತೈಲ ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ.
ಚೆನ್ನೈನ ವಿದೇಶಿ ಬ್ಯಾಂಕೊಂದು ಆದಾಯ ತೆರಿಗೆ ಇಲಾಖೆಯ ಗುಪ್ತಚರ ದಳಕ್ಕೆ ಸುಳಿವು ನೀಡಿದ್ದೇ ತಡ, ಇಲಾಖೆಯು ಡಿಸೆಂಬರ್ 31ರ ರಾತ್ರಿ ದಲ್ಲಾಳಿ ಮನೆ/ಕಚೇರಿಗೆ ದಾಳಿಯಿಟ್ಟು, ಆತ ಅಷ್ಟೊಂದು ಭಾರಿ ಮೊತ್ತದ ಅಮೆರಿಕನ್ ಬಾಂಡುಗಳನ್ನು ಹೊಂದಿರುವುದಾದರೂ ಹೇಗೆ ಎಂದು ತನಿಖೆ ನಡೆಸುತ್ತಿವೆ.
5 ಶತಕೋಟಿ ಡಾಲರ್ ಮೌಲ್ಯದ ಅಮೆರಿಕ ಸರಕಾರಿ ಖಜಾನೆ ಬಾಂಡುಗಳನ್ನು ಹೆಚ್ಚಿನ ತನಿಖೆಗಾಗಿ ನವದೆಹಲಿಗೆ ಕಳಿಸಲಾಗಿದೆ. ರಾಮಲಿಂಗಂ, ತಿರುಪ್ಪೂರ್ ಜಿಲ್ಲೆಯ ನಾನಾ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟುಗಳಲ್ಲಿ 1.5 ಕೋಟಿ ರೂ. ಹೂಡಿಕೆ, ಮತ್ತೊಂದು ಖಾತೆಯಲ್ಲಿ 30 ಕೋಟಿ ರೂ. ಹೂಡಿಕೆ ಮಾಡಿರುವುದೂ ಪತ್ತೆಯಾಗಿದೆ.
ಬ್ರೆಜಿಲ್, ಮ್ಯಾನ್ಮಾರ್, ದುಬೈ, ಸಿಂಗಾಪುರ, ಚೀನಾಕ್ಕೆ ಈತ ಅನೇಕ ಬಾರಿ ಭೇಟಿ ನೀಡಿರುವುದು ಈತನ ಪಾಸ್ ಪೋರ್ಟ್ ಮೂಲಕ ತಿಳಿದುಬಂದಿದೆ. ಆದರೆ ಇಲಾಖೆ ಸದ್ಯಕ್ಕೆ ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆಯೇ ಹೊರತು, ಬಂಧನಕ್ಕೊಳಪಡಿಸಿಲ್ಲ.












Click it and Unblock the Notifications