ಹೆಂಡ್ತಿ ಮುಂದೆ ಗಂಗ್ನಮ್ ಡ್ಯಾನ್ಸ್ ಮಾಡುತ್ತಾ ಸತ್ತ

ಅದೇನೂ ಇತ್ತೀಚೆಗೆ ಕಾಣಿಸಿಕೊಂಡಿದೆಯಲ್ಲಾ... ಗಂಗ್ನಮ್ ಶೈಲಿ (Gangnam Style) ಕುಣಿತ ಅಂತ. ವಿಂಡೀಸ್ ದಾಂಡಿಗ ಗೇಲ್ ಇತ್ತೀಚೆಗೆ ಪರಾಕಾಷ್ಠೆಗೆ ತಲುಪಿ, ಈ ಡ್ಯಾನ್ಸ್ ಅನ್ನು ಹುಚ್ಚಾಪಟ್ಟೆ ಮಾಡಿ, ಸೈ ಎನಿಸಿಕೊಂಡಿದ್ದ. ಅವರಿಗೇನೂ ಸರಿ ಹೋದೀತು. ಆದರೆ ಎಲ್ಲರೂ ಅದನ್ನೇ ಮಾಡೋಕ್ಕೆ ಹೋದರೆ ಎಡವಟ್ಟಾಗುತ್ತದೆ.
ಆಫೀಸಿನಲ್ಲಿ ಕ್ರಿಸ್ ಮಸ್ ಪಾರ್ಟಿ ಜೋರಾಗಿಯೇ ನಡೆದಿತ್ತು. ಈತನೋ ಮೂವರು ಮಕ್ಕಳ ತಂದೆ. 18, 21 ಮತ್ತು 22 ವರ್ಷದ ಮೂವರು ಮಕ್ಕಳಿದ್ದಾರೆ. ಆಫೀಸಿಗೆ ಹೆಂಡತಿಯನ್ನೂ ಕರೆದೊಯ್ದು ಮನಸೋಇಚ್ಛೆ Gangnam Styleನಲ್ಲಿ ಕುಣಿದಾಡಿಬಿಟ್ಟಿದ್ದಾನೆ. ಹೆಂಡ್ತೀ ಜೂಲಿಯನ್ನು ಆಫೀಸಿಗೆ ಏಕೆ ಕರೆದುಕೊಂಡು ಹೋದನೆಂದರೆ ಅಂದು ಆಕೆಯ ಹುಟ್ಟುಹಬ್ಬವಿತ್ತು.
ನಮ್ಮೀ ಕಥಾನಾಯಕ 46 ವರ್ಷದ ಈಮಾನ್ ಕಿಲ್ ಬ್ರೈಡ್ (ಆದರೆ, ಚಿತ್ರದಲ್ಲಿರುವಾತ ಗಂಗ್ನಮ್ ನೃತ್ಯ ಶೈಲಿಯ ಹುಚ್ಚೆಬ್ಬಿಸಿದ ಪಿಎಸ್ವೈ) ಕುಣಿಕುಣಿಯುತ್ತಲೇ ನೆಲಕ್ಕೆ ಒರಗಿದ್ದಾನೆ. ಹೃದಯಾಘಾತವಾಗಿದೆ. ತಕ್ಷಣ ಎದೆ ಹಿಡಿದುಕೊಂಡು ಹೇಳಿಕೊಂಡಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಹೃದಯ ನಿಂತುಹೋಗಿದೆ. ಲಂಡನ್ನಿನ ಲಂಕಾಷೈರಿನಲ್ಲಿ ಈ ದುರ್ಘಟನೆ ನಡೆದಿದೆ.
'ಅವನು ನಿಜಕ್ಕೂ ಹೃದಯವಂತ. ನಮ್ಮದು 23 ವರ್ಷಗಳ ಸುಖೀ ದಾಂಪತ್ಯ. ಅವನೋ ಅಪ್ಪಟ ಗಂಡ, ಮಕ್ಕಳಿಗೆ ಅಪ್ಪಟ ಅಪ್ಪ. ಎಲ್ಲಾ ನನ್ನ ದುರ್ದೈವ. ಈ ರೀತಿ ನಮ್ಮನ್ನು ಬಿಟ್ಟುಹೋಗಿದ್ದಾನೆ' ಎಂದು ಜೂಲಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಹೇಳಿದ್ದಾಳೆ.
ಇನ್ನೇನು ಕ್ರಿಸ್ ಮಸ್ ಕಾಲಿಡುತ್ತಿದೆ. ಇಂತಹ ಹುಚ್ಚಾಟಗಳು ಇನ್ನು ಏಷ್ಟೆಲ್ಲ ನಡೆಯುತ್ತವೋ.












Click it and Unblock the Notifications