ರೈಲಿನಲ್ಲಿ ಮಹಿಳೆಯ ಚಿನ್ನ, 18 ಲಕ್ಷ ನಗದು ದರೋಡೆ

55 ವರ್ಷದ ಜ್ಯೋತ್ಸನಾ ಶುಕ್ಲಾ 18 ಲಕ್ಷ ರೂ ನಗದು ಮತ್ತು ಚಿನ್ನಾಭರಣ ಕಳೆದುಕೊಂಡ ಮುಂಬೈ ನಿವಾಸಿ. ಈಕೆ ತಮ್ಮ ಬಂಧುವೊಬ್ಬರ ಮದುವೆಗೆಂದು ಇಂದೋರಿಗೆ ಎಸಿ ಕೋಚ್ ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಮದುವೆ ಅಂದಮೇಲೆ ವಧುವಿನಂತೆ ತಾನೂ ಮೆರೆಯಬೇಕು ಅಂದುಕೊಂಡು 18 ಲಕ್ಷ ರೂ ಚಿನ್ನಾಭರಣ ಮೈಮೇಲೆ ಹಾಕಿಕೊಂಡಿದ್ದರಾ ಈ ಹಿರಿಯಾಕೆ? ಅಥವಾ ವಧುವಿಗೆಂದೇ ಇದನ್ನೆಲ್ಲ ತರುತ್ತಿದ್ದರಾ? ತಿಳಿದುಬಂದಿಲ್ಲ. ಆದರೂ ಪಾಪ ಇಷ್ಟೊಂದು ನಗದು, ಆಭರಣವನ್ನು ಯಾರ(ವು)ದೇ ರಕ್ಷಣೆಯಿಲ್ಲದೆ ಹೊತ್ತೊಯ್ಯುವ ಜರೂರತ್ತು ಆಕೆಗೆ ಏನಿತ್ತೋ?
ಏನಾಯಿತೆಂದರೆ ನಾಲ್ಕು ವಜ್ರಖಚಿತ ಬಳೆಗಳು, ನಾಲ್ಕು ಚಿನ್ನದ ಬಳೆಗಳು ಮತ್ತು 18 ಲಕ್ಷ ರೂ ನಗದನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ಅದನ್ನು ತನ್ನ ತಲೆದಿಂಬಿನಡಿ ಇಟ್ಟುಕೊಂಡು ನಿದ್ರೆಗೆ ಜಾರಿದ್ದಾರೆ, ಅಷ್ಟೆ. ಆತ್ತ ಇಂತಹ ಸುಸಮಯಕ್ಕಾಗಿ ಹೊಂಚುಹಾಕುತ್ತಿದ್ದ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ.
ಬೆಳಗ್ಗೆ 6 ಗಂಟೆಗೆ ರತ್ಲಂ ನಿಲ್ದಾಣದ ಬಳಿ ಎಚ್ಚರವಾಗಿ ದಿಂಬಿನಡಿ ಕೈಹಾಕಿದಾಗಲೇ ಆಕೆಗೆ ತನ್ನ ನಿಧಿ ಕೈಬಿಟ್ಟಿರುವುದು ಅರಿವಿಗೆ ಬಂದಿರುವುದು. ತಕ್ಷಣ ರೈಲ್ವೆ ಸಿಬ್ಬಂದಿ ರೈಲಿನಲ್ಲಿ ತಡಕಾಡಿದಾಗ ಟಾಯ್ಲೆಟ್ಟಿನಲ್ಲಿ ಖಾಲಿಯಾಗಿ ಬಿದ್ದಿದ್ದ ಆಭರಣದ ಚೀಲ ಪತ್ತೆಯಾಗಿದೆ.












Click it and Unblock the Notifications