ಸದನದಲ್ಲಿ ಸಿದ್ದರಾಮಯ್ಯ ಪಂಚೆ ಎಳೆದವರಾರು!?

siddaramaiah-waist-line-and-lungi-belgaum-assembly
ಬೆಳಗಾವಿ, ಡಿ.13: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗೊತ್ತಲ್ಲಾ? ಅದೇ ಮಾಜಿ ಜೆಡಿಎಸ್, ಹಾಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಸದನದಲ್ಲಿ ಇವರು ಎದ್ದುನಿಂತರೆಂದರೆ ಆಡಳಿತ ಪಕ್ಷದ ಸದಸ್ಯರ ಎದೆಯಲ್ಲಿ ತೌಡು ಕುಟ್ಟಲಾರಂಭಿಸುತ್ತದೆ.

ಹೇಳಿ ಕೇಳಿ ಪಂಚೆ ಮತ್ತು ಹೆಗಲ ಮೇಲೆ ಟವಲ್ ನಮ್ ಸಿದ್ದರಾಮಯ್ಯನವರ ವ್ಯಕ್ತಿತ್ವದ ಹೆಗ್ಗುರುತು. ಅಂಥಾದ್ದರಲ್ಲಿ ಅವರ ಪಂಚೆಯೇ ಜಾರಿದರೆ, ಅದೂ ವಿಧಾನಸೌಧದಲ್ಲಿ!

ಹೌದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಶೇಷ ಅಧಿವೇಶನಕ್ಕೆ ಇಂದು ಕೊನೆಯ ದಿನ. ನಮ್ ಸಿದ್ರಾಮಣ್ಣ ಅವರೂ ವೀರಾವೇಶದಿಂದ ಮಾತನಾಡುತ್ತಿದ್ದರು. ಅಧಿವೇಶನ ನಾಳೆಯೂ ನಡೆಯಬೇಕು. ಇನ್ನೂ ಏನೂ ಚರ್ಚೆಗಳೇ ಆಗಿಲ್ಲ. ಎಂದೆಲ್ಲಾ ಮಾತನಾಡುತ್ತಿದ್ದರು.

ಆದರೆ ಅದ್ಯಾವದೋ ಮಾಯದಲ್ಲಿ ಅವರ ಪಂಚೆ ತುಸು ಜಾರಿದೆ. ಎದ್ದುನಿಂತು ಮಾತನಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಏನೋ ಎಡವಟ್ಟಾಗುತ್ತಿದೆಯಲ್ಲಾ ಎಂಬುದು ಅರಿವಿಗೆ ಬಂದಿದೆ. ಹೌದು, ಪಂಚೆ ಬಿಗಿ ಸಡಿಲಗೊಂಡಿದೆಯಷ್ಟೇ ಎಂದು ನಿರಾಳಗೊಂಡು ಅದೇ ಲಹರಿಯಲ್ಲಿ ಪಂಚೆಯ ಎರಡೂ ತುದಿಗಳನ್ನು ಬಿಗಿಯಾಗಿ ಎಳೆದುಕೊಳ್ಳುತ್ತಾ ಪಂಚೆಯನ್ನು ಎತ್ತಿಕಟ್ಟಿದ್ದಾರೆ.

ಸದನದಲ್ಲಿ ಹಾಜರಿದ್ದ ಬೆರಳೆಣಿಕೆಯ ಸದಸ್ಯರು ಇದನ್ನೆಲ್ಲ ಸಾಕ್ಷಾತ್ ಆಗಿ ಕಂಡು... ಮೂಕವಿಸ್ಮಿತರಾಗಿದ್ದಾರೆ. ಇನ್ನು ಸ್ಪೀಕರ್ ಬೋಪಯ್ಯ ಅವರಂತೂ ಏನೂ ಹೇಳಲೂ ಆಗದೆ ಒಳಗೊಳಗೇ ಮುಸಿಮುಸಿ ನಕ್ಕಿದ್ದಾರೆ.

ಆಮೇಲೆ ಸಿದ್ದರಾಮಯ್ಯನವರೂ ಒಂದಷ್ಟು ಸಮಜಾಯಿಷಿ ಕೊಟ್ಟಿದ್ದಾರೆ. ಏನಿಲ್ಲ ಕಣ್ರೀ ಇತ್ತೀಚೆಗೆ ಸ್ವಲ್ಪ ಹೊಟ್ಟೆ ಬಂದಿದೆ. ಹಾಗಾಗಿ ಸರಿಯಾಗಿ ಕಟ್ಟಿಕೊಂಡಿರಲಿಲ್ಲ. ಸ್ವಲ್ಪ ಸಡಿಲ ಆಗಿದೆಯಷ್ಟೇ. ನೀವೇನು ತಪ್ಪುತಿಳ್ಕೋಬೇಡಿ ಎಂದು ನಗೆಯಾಡಿದ್ದಾರೆ.

'ಸದ್ಯ ಬಚಾವಾದ್ವಿ. ಸದನದಲ್ಲಿ ತೋಳೇರಿಸಿ ಆಡಳಿತ ಪಕ್ಷದವರ ಮೇಲೆ ಬರುವುದು ಸಹಜ. ಆದರೆ ನಮ್ ಸಿದ್ದರಾಮಯ್ಯನವರು ಪಂಚೆಯೇರಿಸಿಕೊಂಡು ನಮ್ಮತ್ತ ಧಾವಿಸುತ್ತಾರಾ? ಎಂದು ಭಯಬಿದ್ದಿದ್ವಿ' ಎಂದು ಆಡಳಿತಾರೂಢ ಸದಸ್ಯರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಆದರೆ ನಾಲ್ಕಾರು ದಿನದಿಂದ ಸಿದ್ದರಾಮಯ್ಯನವರನ್ನು ಸದನದಲ್ಲಿ observe ಮಾಡಿದ್ದ ಪತ್ರಕರ್ತರು ಮಾತ್ರ... 'ಏನಿಲ್ಲ ಬೆಳಗಾವಿಗೆ ಬಂದು ಸ್ವಲ್ಪ ಮೈಮನ ಸಡಿಲಮಾಡಿಕೊಂಡಿದ್ದಾರೆ. ಮಧ್ಯಾಹ್ನದೊತ್ತು ತುಸು ಹೆಚ್ಚೇ ಅನಿಸುವಷ್ಟು ಸದನದಲ್ಲೇ ಗೊರಕೆ ಹೊಡೆಯುತ್ತಿದ್ದಾರೆ. ಹಾಗಾಗಿ ಸ್ವಲ್ಪ ಮೈಕೈ ತುಂಬಿದೆ' ಎಂದು ಸಿದ್ದರಾಮಯ್ಯನವರಿಗೆ ಕೇಳಿಯೂ ಕೇಳಿಸದಷ್ಟು ಜೋರಾಗಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧ ಇಂಥದ್ದಕ್ಕೂ ಸಾಕ್ಷಿಯಾಗಬೇಕಾಯಿತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+