ಮಲ್ಯಗೆ ಮತ್ತೆ ಹೊಡೆತ, 7 ವಿಮಾನಗಳು ಜಪ್ತಿ

ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಹಲವಾರು ತಿಂಗಳಿನಿಂದ ಸೇವಾ ತೆರಿಗೆ ಪಾವತಿಸಿಲ್ಲ ಹೀಗಾಗಿ ಸಂಸ್ಥೆಗೆ ಸೇರಿದ 7 ವಿಮಾನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಎಂಐಎಎಲ್) ಪ್ರಕಟಿಸಿದೆ.
ಬಾಕಿ ಇರುವ 63 ಕೋಟಿ ರು ಪಾವತಿಸುವಂತೆ ಕಿಂಗ್ ಫಿಷರ್ ಸಂಸ್ಥೆಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು.
ಆದರೆ, ಕಿಂಗ್ ಫಿಷರ್ ಸಂಸ್ಥೆ ನೋಟಿಸ್ ಗೆ ಉತ್ತರಿಸುವ ಸೌಜನ್ಯವನ್ನು ತೋರಿಲ್ಲ. ಹೀಗಾಗಿ 7 ವಿಮಾನಗಳನ್ನು ಜಪ್ತಿ ಮಾಡಲಾಗಿದೆ. ಬಾಕಿ ಮೊತ್ತವನ್ನು ನೀಡಿದ ಮೇಲೆ ಮಾತ್ರ ಈ ವಿಮಾನಗಳನ್ನು ಹಿಂಪಡೆದು ಹಾರಾಟಕ್ಕೆ ಬಿಡಬಹುದು ಎಂದು ಮುಂಬೈ ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.
7 ವಿಮಾನಗಳಲ್ಲಿ 62 ಸೀಟ್ ಗಳುಳ್ಳ ಎಟಿಆರ್ ಏರ್ ಕ್ರಾಫ್ಟ್ ಪ್ರಮುಖವಾಗಿದೆ. ಮುಂಬೈ ನಿಲ್ದಾನಕ್ಕೆ ನೀಡಿರುವ ಬಾಕಿ ಮೊತ್ತದಲ್ಲಿ 23 ಕೋಟಿ ಪಾರ್ಕಿಂಗ್ ಹಾಗೂ ನ್ಯಾವಿಗೇಷನ್ ಶುಲ್ಕ ಕೂಡಾ ಸೇರಿದೆ.
7000 ಕೋಟಿ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು 200 ಕೋಟಿ ವಿಮಾನ ನಿಲ್ದಾಣಗಳ ನಿರ್ವಹಣೆ ಹೊತ್ತಿರುವ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಪಾವತಿಸಬೇಕಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ ಆಪದ್ಬಾಂಧವನಾಗಿ ಅಬು ಧಾಬಿ ಏರ್ ಲೈನ್ಸ್ ಕಂಪನಿಯೊಂದು ಕೈಹಿಡಿದ ಸುದ್ದಿ ಬೆಳಗ್ಗೆ ಓದಿರಬಹುದು.
Etihad Airways ಮೊದಲ ಕಂತಿನಲ್ಲಿ ಬರೋಬ್ಬರಿ 3000 ಕೋಟಿ ರೂ.ಗಳನ್ನು KFAನಲ್ಲಿ ಹೂಡಿಕೆ ಮಾಡಲಿದೆ. ಎರಡನೆಯ ಕಂತಿನಲ್ಲಿ ಮತ್ತೂ 1,800 ಕೋಟಿ ರೂ. ತೊಡಗಿಸಲಿದೆ. ಅರ್ಥಾತ್ ಶೇ. 48ರಷ್ಟು ಪಾಲು ಅಂದರೆ 4,8000 ಕೋಟಿ ರೂ.ಗೆ KFA ಭಾಗಶಃ ಮಾರಾಟವಾದಂತಾಗಿದೆ.
ಈ ನಡುವೆ ಕಿಂಗ್ ಫಿಷರ್ ಮೇಲೆ Etihad Airways ಹಿಡಿತ ಹೊಂದುವ ಮೊದಲು ತೆರಿಗೆ ಬಾಕಿ, ಸಾಲ ಬಾಕಿ ಹಿಂಪಡೆಯಲು ಸಾಲ ಕೊಟ್ಟ ಸಂಸ್ಥೆಗಳು ಯೋಜಿಸಿದೆ.
ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ. 17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ.
ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ. ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.












Click it and Unblock the Notifications