ಬಾಲಕಿಯ ಗ್ಯಾಂಗ್ ರೇಪ್: ಉಳ್ಳಾಲ ಉದ್ವಿಗ್ನ

ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಗ್ರಾಮಾಂತರ ಉಳ್ಳಾಲ ಭಾಗದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಬಾಧಿತ ಬಾಲಕಿ ಮಂಗಳೂರು ತಾಲೂಕಿನ ಕೆಸಿ ರೋಡ್ ನಿವಾಸಿ. ಆರೋಪಿಗಳು ಸಂತ್ರಸ್ತ ಬಾಲಕಿಯ ಬಾಡಿಗೆ ಮನೆಯ ಮಾಲೀಕ ಇಸ್ಮಾಯಿಲ್ ಮತ್ತು ಆತನ ಸ್ನೇಹಿತ ರಹೀಂ ಎಂದು ತಿಳಿದುಬಂದಿದೆ. ರಹೀಂ ಉಪ್ಪಳದ ನಿವಾಸಿ.
ಮಂಗಳವಾರ ಮಧ್ಯಾಹ್ನ ತನ್ನ ಸೋದರಿಯನ್ನು ಇಸ್ಮಾಯಿಲ್ ಕರೆದೊಯ್ದು, ಈ ಹೇಯ ಕೃತ್ಯ ನಡೆಸಿದ್ದಾನೆ ಎಂದು ಬಾಧಿತ ಬಾಲಕಿಯ ಸೋದರಿ ತಿಳಿಸಿದ್ದಾರೆ. ಪ್ರಸ್ತುತ ತಾವು ವಾಸಿಸುತ್ತಿರುವ ಇಸ್ಮಾಯಿಲನ ಮನೆಯ ಬಾಡಿಗೆ ಒಪ್ಪಂದ ಮುಗಿದಿದ್ದು, ಬೇರೊಂದು ಮನೆಯನ್ನು ಅರಸಿಕೊಂಡು ಬಾಧಿತ ಬಾಲಕಿಯ ತಾಯಿ ಹೊರಹೋಗಿದ್ದಾಗ ಸಮಯ ಸಾಧಿಸಿ, ಕಾಮುಕರು ಆ ಬಾಲಕಿಯ ಮೇಲೆ ಎರಗಿದ್ದಾರೆ.
ಸ್ವಲ್ಪ ಬುದ್ಧಿಮಾಂದ್ಯಳಾಗಿರುವ ಬಾಧಿತ ಬಾಲಕಿಯನ್ನು ಇಸ್ಮಾಯಿಲ್ ಆಕೆಯನ್ನು ತಾಯಿಯ ಬಳಿ ಕರೆದೊಯ್ಯುವುದಾಗಿ ಪುಸಲಾಯಿಸಿದ್ದಾನೆ. ತದನಂತರ ಕಾರಿನಲ್ಲಿ ಆಕೆಯನ್ನು ಬಿಸಿ ರೋಡ್ ಗೆ ಕರೆದೊಯ್ದ ಇಸ್ಮಾಯಿಲ್, ಅಲ್ಲಿ ತನ್ನ ಸ್ನೇಹಿತನ ಜತೆಗೂಡಿ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿಯ ಸಹೋದರಿ ದೂರಿದ್ದಾಳೆ.
ಘಟನೆಯ ನಂತರ ಬಾಲಕಿಯನ್ನು ಬುಧವಾರ ಬೆಳಗ್ಗೆ ಕೆಸಿ ರೋಡ್ ಮನೆಯ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications