ಅಮೆರಿಕ ಫೆಲೋಶಿಪ್ ಪಡೆದ ಭಾರತದ ಕಿರಿಯ ವೈದ್ಯ

ಈ ಗೌರವವು ಕೇವಲ ಅಮೆರಿಕದ ವೈದ್ಯರಿಗೆ ಹಾಗೂ ಜೀರ್ಣಾಂಗ ರೋಗಗಳ ಚಿಕಿತ್ಸೆಯಲ್ಲಿ ಪರಿಣತರಾಗಿ ಸೇವೆ ಸಲ್ಲಿಸಿರುವ ಇತರೆ ಅಂತಾರಾಷ್ಟ್ರೀಯ ಮಟ್ಟದ ವೈದ್ಯರಿಗಷ್ಟೇ ಸೀಮಿತವಾಗಿದ್ದು, ಇದೀಗ ಇಂತಹುದೊಂದು ಪ್ರತಿಷ್ಠಿತ ಫೆಲೋಶಿಪ್ ಗೌರವಕ್ಕೆ ಡಾ. ಪ್ರಶಾಂತ್ ಪಾತ್ರರಾಗಿದ್ದಾರೆ. ಭಾರತದ ಐದನೆಯ ಹಾಗೂ ಡಾ|| ನಾಗೇಶ್ವರ ರೆಡ್ಡಿಯವರ ನಂತರ ದಕ್ಷಿಣ ಭಾರತದ ಎರಡನೆಯ ವ್ಯಕ್ತಿಯೆಂಬುದು ಡಾ|| ಪ್ರಶಾಂತ್ ಅವರ ಹೆಗ್ಗಳಿಕೆ.
ಕಳೆದ ಏಳು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದ ಎಫ್.ಎ.ಎಸ್.ಜಿ.ಇ. ಸದಸ್ಯರಾಗಿರುವ ಇವರಿಗೆ, ಪ್ರಸ್ತುತ ಈ ಫೆಲೋಶಿಪ್ ದೊರೆತಿದೆ. ಈ ಗೌರವಕ್ಕೆ ಪಾತ್ರರಾದ ಭಾರತದ ಅತಿ ಕಿರಿಯ ವಯಸ್ಸಿನ ವೈದ್ಯರೆಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಇದಲ್ಲದೆ ಅಮೆರಿಕದ ಓರ್ಲಾಂಡೋದಲ್ಲಿ 2013ರ ಮೇ ತಿಂಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕ್ರಿಸ್ಟಲ್ ಪ್ರಶಸ್ತಿ ಸ್ವೀಕರಿಸಲು ಸಹ ಡಾ|| ಪ್ರಶಾಂತ್ ಅವರು ಆಹ್ವಾನಿತರಾಗಿದ್ದಾರೆ.
ತುಮಕೂರಿನ ಖ್ಯಾತ ವೈದ್ಯ ಡಾ|| ಬಿ.ಎನ್. ನಿರ್ವಾಣಿ ರಾವ್ ಮತ್ತು ಉಷಾವತಿ ದಂಪತಿಯ ಪುತ್ರರಾದ ಡಾ|| ಪ್ರಶಾಂತ್, ಸ್ನಾತಕೋತ್ತರ ಶಸ್ತ್ರಚಿಕಿತ್ಸೆ(ಎಂ.ಎಸ್.)ಯಲ್ಲಿ ಮೈಸೂರು ವಿ.ವಿ.ಯಲ್ಲಿ ಅಗ್ರಸ್ಥಾನ ಹೊಂದಿ ಚಿನ್ನದ ಪದಕ ಪಡೆದಿದ್ದರು. ದೇಶ ಹಾಗೂ ವಿದೇಶಗಳಲ್ಲಿ ನಡೆದಿರುವ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೈದ್ಯ ಸಮ್ಮೇಳನಗಳಲ್ಲೂ ಇವರು ಪಾಲ್ಗೊಂಡು ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ.












Click it and Unblock the Notifications