ಭಾರತದಲ್ಲಿ ನೆಲೆಸಲು ಬೆಂಗಳೂರೇ ಬೆಸ್ಟ್

ನವದೆಹಲಿ, ಮುಂಬೈ ಹಾಗೂ ಕೋಲ್ಕತ್ತಾ ಮಹಾ ನಗರಿಗಳನ್ನು ಹಿಂದಕ್ಕೆ ಹಾಕಿರುವ ಬೆಂಗಳೂರು ಒಟ್ಟಾರೆ ಉತ್ತಮ ಗುಣಮಟ್ಟದ ಜನಜೀವನ ಉಳ್ಳ ನಗರ ಎಂಬ ವಿಷಯ ಜಾಗತಿಕ ಮಟ್ಟದಲ್ಲಿ ನಗರಗಳ ಬಗ್ಗೆ ನಡೆದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಗ್ಲೋಬಲ್ ಎಚ್ ಆರ್ ಕನ್ಸಲ್ಟೆನ್ಸಿ ಮರ್ಸರ್ ಸಂಸ್ಥೆ ನಡೆಸಿದ ಜೀವನ ಗುಣಮಟ್ಟ ಸಮೀಕ್ಷೆಯಲ್ಲಿ ಬೆಂಗಳೂರು(139ನೇ ಸ್ಥಾನ) ಸೇರಿದಂತೆ ನವದೆಹಲಿ(143), ಮುಂಬೈ(146), ಚೆನ್ನೈ(150) ಹಾಗೂ ಕೋಲ್ಕತ್ತಾ(151) ಸ್ಥಾನ ಪಡೆದಿದೆ.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಉಳ್ಳ ಶಾಲೆಗಳು, ಕಾಲೇಜುಗಳಿದ್ದು ಜನಜೀವನ ಗುಣಮಟ್ಟವನ್ನು ಹೆಚ್ಚಿಸಿದೆ ಎಂದು ಸಮೀಕ್ಷೆ ಹೇಳಿದೆ.
ಆದರೆ, ಮೂಲ ಸೌಕರ್ಯದ ವಿಷಯದಲ್ಲಿ ಬೆಂಗಳೂರು ಹಿಂದೆ ಬಿದ್ದಿದೆ. ಮುಂಬೈ(134), ಕೋಲ್ಕತ್ತಾ(141), ನವದೆಹಲಿ(153), ಚೆನ್ನೈ(168) ನಂತರದ ಸ್ಥಾನದಲ್ಲಿ ಬೆಂಗಳೂರು(170) ಇದೆ
ಜಾಗತಿಕವಾಗಿ ವಿಯನ್ನಾ, ಜ್ಯೂರಿಚ್ ಹಾಗೂ ಆಕ್ಲೆಂಡ್ ಅಗ್ರಸ್ಥಾನ ಪಡೆದಿದೆ. ಆನಂತರ ಸ್ಥಾನಗಳಲ್ಲಿ ಮ್ಯೂನಿಚ್, ವ್ಯಾಂಕುವರ್, ಡುಸ್ಸಲ್ಡೊರ್ಫ್, ಫ್ರಾಂಕ್ ಫರ್ಟ್, ಜಿನೀವಾ, ಕೊಪನ್ ಹೇಗನ್, ಬಾರ್ನ್ ಹಾಗೂ ಸಿಡ್ನಿ ಇದೆ.
ಬದುಕಲು ದುರ್ಬರವಾಗಿರುವ ನಗರಗಳ ಪಟ್ಟಿಯಲ್ಲಿ ಖೋರ್ಟೊಮ್. ಸೂಡನ್(217), ಚಾಡ್(218), ಪೋರ್ಟ್ ಅ ಪ್ರಿನ್ಸ್ ಹೈತಿ, ಬಾಗ್ದಾದ್, ನಗರಗಳು ಕಾಣಿಸಿಕೊಂಡಿದೆ.
ನಗರಗಳ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ, ಕ್ರೈಂ ರೇಟ್, ವೈದ್ಯಕೀಯ ವ್ಯವಸ್ಥೆ, ಮೂಲ ಸೌಕರ್ಯ, ಸಾಮಾನ್ಯ ಜನರ ಜೀವನ ಶೈಲಿ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದೆ ಎಂದು ಮರ್ಸರ್ ನ ಹಿರಿಯ ಸಂಶೋಧಕ ಸ್ಲಗಿನ್ ಪಾರಾಕಟಿಲ್ ಹೇಳಿದ್ದಾರೆ. [ಮತ್ತೊಂದು ಸಮೀಕ್ಷೆ]
ಆದರೆ, ಸ್ಥಳೀಯ ದಾಖಲೆಗಳು ಬೇರೆಯದೆ ಕತೆ ಹೇಳುತ್ತದೆ. ಕಳ್ಳತನ ಪ್ರಕರಣಗಳ ಲೆಕ್ಕಾಚಾರದಲ್ಲಿ ದೆಹಲಿ ಬಿಟ್ಟರೆ ದೇಶದಲ್ಲಿ ಬೆಂಗಳೂರಿನಲ್ಲೇ ಕಳ್ಳತನ ಹೆಚ್ಚಾಗುತ್ತದೆ.
2007 ರಿಂದ 2011 ರ ಅವಧಿಯಲ್ಲಿ ದೆಹಲಿಯಲ್ಲಿ 32,240 ಪ್ರಕರಣಗಳು ದಾಖಲಾಗಿದ್ದರೆ ಬೆಂಗಳೂರಿನಲ್ಲಿ 21,332 ಪ್ರಕರಣಗಳು ಕಂಡು ಬಂದಿದೆ ಎಂದು National Crime Record Bureau report (NCRB) ವರದಿ ಹೇಳಿದೆ.
State Crime Records Bureau (SCRB) ಪ್ರಕಾರ 2011ರಲ್ಲಿ 32,954 IPC ಕೇಸುಗಳು ದಾಖಲಾಗಿದೆ. ಕ್ರೈಂ ರೇಟ್ ಪ್ರಕಾರ ಮಂಗಳೂರು (582.85) ಮುಂದಿದ್ದು, ಬೆಂಗಳೂರು (343.70) ನಂತರದ ಸ್ಥಾನದಲ್ಲಿದೆ.
ಸೈಬರ್ ಕ್ರೈಂಗಳಲ್ಲೂ ಬೆಂಗಳೂರು ಮುಂದಿದೆ. ರಾಜ್ಯದಲ್ಲಿ ದಾಖಲಾದ 151 ಪ್ರಕರಣಗಳಲ್ಲಿ ಶೇ 77.48 ರಷ್ಟು ಬೆಂಗಳೂರಿನಲ್ಲೇ ಸಂಭವಿಸಿದೆ.












Click it and Unblock the Notifications