ಮೊಬೈಲ್ ಪ್ರೇಮ: ಬಾಯ್ ಫ್ರೆಂಡ್ ಮುದುಕನಾದಾಗ!

ಏನಾಯಿತೆಂದರೆ ಅವಳಿನ್ನೂ 23 ವರ್ಷದ ಸ್ನಾತಕೋತ್ತರ ಇಂಜಿನಿರಿಂಗ್ ವ್ಯಾಸಂಗ ಮಾಡುತ್ತಿರುವ ಜಾಣೆ. ಆದರೆ ವಯೋಸಹಜವಾಗಿ ಪ್ರೇಮ ಪಾಶಕ್ಕೆ ಸಿಕ್ಕಿದಳು. ಹಾಗಂತ ಮೊಬೈಲಿನಲ್ಲಿ ಮಾತನಾಡುತ್ತಲೇ ವ್ಯಕ್ತಿಯೊಬ್ಬರನ್ನು ತನ್ನ ಬಾಯ್ ಫ್ರೆಂಡ್ ಆಗಿ ಭಾವಿಸಿದಳು.
ಸರಿ, ಆ ಬಾಯ್ ಫ್ರೆಂಡ್ ಜತೆಗೇ ಮೊಬೈಲಿನಲ್ಲೇ ಪ್ರೀತಿ-ಪ್ರೇಮ ಶುರುವಿಟ್ಟುಕೊಂಡಳು. ನೀನೇ ನನ್ನ ಪ್ರಾಣಸಖ ಎಂದು ತನ್ನ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದಳು. ರಿಸೀವರ್ ಎಂಡ್ ನಲ್ಲಿದ್ದ ವ್ಯಕ್ತಿಯೂ ಅನುಮಾನಕ್ಕೆ ಎಡೆಯಿಲ್ಲದಂತೆ ಸ್ನಾತಕೋತ್ತರ ಇಂಜಿನಿಯರ್ ಅನ್ನು ಪ್ರೇಮದ ಬಲೆಗೆ ಕೆಡವಿದ.
ಮುಂದ!?: ತಿರುವನಂತಪುರದ ಆ ಜೂಲಿಯಟ್ ಗೆ ಹೆಚ್ಚು ತಡೆಯಲಾಗಿಲ್ಲ. ತನ್ನ ರೋಮಿಯೋನನ್ನು ಹುಡುಕಿಕೊಂಡು ಸೀದಾ ಅವನಿದ್ದ ಕಣ್ಣೂರಿಗೆ ಧಾವಿಸಿದ್ದಾಳೆ. ಆದರೆ ಅಲ್ಲಿ ಅವಯ್ಯನ ದರುಶನವಾಗಿಲ್ಲ. ತೀರಾ ಬೇಜಾರಾಗಿ ಬಸ್ ಸ್ಟಾಂಡಿನಲ್ಲಿ ಶತಪಥ ಹಾಕಲಾರಂಭಿಸಿದ್ದಾಳೆ. ಆಕೆಯ ಹಾವಭಾವವನ್ನು ಗಮನಿಸಿದ ಅನುಭವೀ ವ್ಯಕ್ತಿಯೊಬ್ಬರು ಆಕೆಯ ಬಳಿ ಬಂದು, ಏನಮ್ಮಾ ವಿಷ್ಯಾ ಯಾಕೆ ಹೀಗೆ ಅಲೆಯುತ್ತಿದ್ದೀಯಾ ಎಂದು ಕೇಳಿದ್ದಾರೆ.
ಅಷ್ಟಕ್ಕೇ ಗೊಳೋ ಎಂದ ಯುವತಿ ಹೀಗೆ ಹೀಗೆ ನನ್ನ ಮೊಬೈಲ್ ಬಾಯ್ ಫ್ರೆಂಡ್ ಸಿಕ್ತೀನಿ ಅಂತ ಹೇಳಿದ್ದ. ಆದರೆ ಅವಯ್ಯ ಬಂದೇ ಇಲ್ಲ. ನನಗೆ ಚಡಪಡಿಕೆ ಹೆಚ್ಚಾಗಿದೆ ಎಂದು ಅಲವತ್ತುಕೊಂಡಿದ್ದಾಳೆ. ಇದನ್ನು ಕೇಳಿದ ಆ ವ್ಯಕ್ತಿ ಆಕೆಯನ್ನು ಸೀದಾ ಪೊಲೀಸ್ ಸ್ಟೇಷನ್ನಿಗೆ ಕರೆದೊಯ್ದು ಬಿಟ್ಟಿದ್ದಾರೆ.
ಮೊಬೈಲ್ ಫೋನ್ ಇನ್ನೂ ಎಂತೆಂಥಾ ಪ್ರೇಮ ಪ್ರಕರಣಗಳಿಗೆ ಸಾಕ್ಷಿಯಾಗುತ್ತದೋ!?:
ಅಲ್ಲಿ ಪೊಲೀಸರು ಈಕೆಯ ಪೂರ್ವಾಪರಗಳನ್ನು ಕೇಳಿ, ಪ್ರಕರಣ ಬೇಧಿಸಲು ಮುಂದಾಗಿದ್ದಾರೆ. ಆಕೆಯಿಂದ ಮೊಬೈಲ್ ನಂಬರ್ ಇಸ್ಕೊಂಡು 'ಬಾಯ್ ಫ್ರೆಂಡ್' ಗೆ ಕರೆ ಮಾಡಿ, ಸ್ವಲ್ಪ ಸ್ಟೇಷನ್ನಿಗೆ ಬಂದ್ಹೋಗು ಎಂದು ಗದರಿಕೊಂಡಿದ್ದಾರೆ.
ಪಾಪ ಅವಯ್ಯ ಕಾಲೂರಿಕೊಂಡು ಸ್ಟೇಷನ್ನಿಗೆ ಬಂದು... ನಾನೇ ಅವನು ಏನೀಗ ಎಂದಿದ್ದಾರೆ. ಅಷ್ಟೇ ಅದನ್ನು ಕೇಳಿಸಿಕೊಂಡು, ಆ ವ್ಯಕ್ತಿಯನ್ನು ಸಾಕ್ಷಾತ್ತಾಗಿ ನೋಡಿ, ಬೇಸ್ತು ಬಿದ್ದ ಕಥಾನಾಯಕಿಗೆ ತಾನು ನಿಂತ ನೆಲವೇ ಕುಸಿದಂತಾಗಿದೆ. ದೊಪ್ಪನೆ ನೆಲಕ್ಕೆ ಬಿದ್ದಿದ್ದಾಳೆ.
ಆಗಿದ್ದಿಷ್ಟೇ ... ಆ ಬಾಯ್ ಫ್ರೆಂಡ್ 67 ವಯಸ್ಸಿನ ಮುದುಕ. ಹಾಗೇ ಟೈಮ್ ಪಾಸಿಗೆ ಫೋನಿಗೆ ಸಿಕ್ಕ ಯುವತಿಯ ಜತೆ ಪ್ರೇಮವಿಟ್ಟುಕೊಂಡಿದ್ದಾನೆ. ಮುಂದೆ... ಆ ಯುವತಿಯನ್ನು ವಂಚಿಸುವ ಜರೂರತ್ತಾಗಲಿ/ಬಯಕೆಯಾಗಲಿ ತನಗಿಲ್ಲ. ಏನೋ ಹಾಗೆ ಸುಖಾಸುಮ್ಮನೆ... ಎಂದು ಬೊಚ್ಚುಬಾಯಿಯಿಂದ ತಾತಪ್ಪ ನಗೆಚಿಮ್ಮಿದ್ದಾರೆ.
ವಾಸ್ತವಕ್ಕೆ ಮರಳಿದ ಪೊಲೀಸರು ಕಥಾನಾಯಕಿಯನ್ನು ಎಚ್ಚರಿಸಿ, ಮುಂದೆ ಹೀಗೆಲ್ಲ ಮಾಡ್ಕೋಬೇಡಮ್ಮಾ... ಜೀವನದಲ್ಲಿ ಜಾಗ್ರತೆ ಇರಲಿ ಎಂದು ಬುದ್ಧಿಮಾತು ಹೇಳಿ ಕಳಿಸಿದ್ದಾರೆ.












Click it and Unblock the Notifications