ಆಟೋ ರಿಕ್ಷಾದಲ್ಲಿ 6.7 ಕೋಟಿ ರು. ನೋಟು ಪತ್ತೆ!

ಒಂದು ಆಟೋ ರಿಕ್ಷಾದಿಂದ ಇನ್ನೊಂದಕ್ಕೆ ಆಟೋದಲ್ಲಿದ್ದ ವ್ಯಕ್ತಿ ಬ್ಯಾಗುಗಳನ್ನು ಸ್ಥಳಾಂತರಿಸುವಾಗ ಅನುಮಾನಗೊಂಡ ಪೊಲೀಸ್ ಪೇದೆ ಆ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಆಟೋ ಕೆಟ್ಟಿದ್ದರಿಂದ ಇನ್ನೊಂದಕ್ಕೆ ಬ್ಯಾಗನ್ನು ಎತ್ತಿಡಲಾಗುತ್ತಿದೆ ಎಂದು ಆಟೋ ಚಾಲಕ ಉತ್ತರಿಸಿದ್ದಾನೆ. ಬ್ಯಾಗಲ್ಲಿ ಏನಿದೆ ತೋರಿಸೆಂದು ಪೇದೆ ಆಗ್ರಹಿಸಿದಾಗ, ಎರಡೂ ಆಟೋಗಳನ್ನು ಅಲ್ಲಿಯೇ ಬಿಟ್ಟು ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಇಬ್ಬರೂ ಏನೋ ಕಿತಾಪತಿ ಮಾಡುತ್ತಿದ್ದಾರೆ ಎಂದು ಅನುಮಾನಿಸಿದ್ದ ಪೇದೆ ಆ ಬ್ಯಾಗುಗಳನ್ನು ತೆಗೆದು ನೋಡಿದಾಗ ಅದರಲ್ಲಿ ನೋಟುಗಳ ಕಟ್ಟುಗಳನ್ನು ನೋಡಿ ಪೇದೆ ದಂಗಾಗಿದ್ದಾರೆ. ಐನೂರು ಮತ್ತು ಸಾವಿರ ರು. ಮೌಲ್ಯದ ನೋಟುಗಳಿದ್ದ ಮೂರು ಬ್ಯಾಗುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ, ಎರಡನೇ ಆಟೋದ ಚಾಲಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸೈಫಾಬಾದ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಎಲ್ಲ ನೋಟುಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದ್ದು, ಆ ನೋಟುಗಳು ಅಸಲಿಯೋ ನಕಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ತರುಣ್ ಜೋಶಿ ಅವರು ತಿಳಿಸಿದ್ದಾರೆ. ಪರಾರಿಯಾಗಿರುವ ಇನ್ನೊಬ್ಬ ಆಟೋ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications