ಹರ್ಯಾಣಾ: ವೈದ್ಯೆ ಮೇಲೆ ವೈದ್ಯನ ಅತ್ಯಾಚಾರ

ಹರ್ಯಾಣಾದ ರೇವಾರಿ ಜಿಲ್ಲೆಯ ದಹೀನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಧಿತ ವೈದ್ಯೆಯ ದೂರನ್ನು ದಾಖಲಿಸಿಕೊಂಡಿರುವ ಖೋಲ್ ಪೊಲೀಸರು ಆರೋಪಿ ಡಾ. ರಣಬೀರ್ ಸಿಂಗ್ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಬಾಧಿತ ಮಹಿಳೆ ವಿಧವೆಯಾಗಿದ್ದು, ಕಳೆದ 14 ವರ್ಷಗಳಿಂದ ಆರೋಪಿಯ ಜತೆ ನಿಕಟ ಸಂಪರ್ಕ ಹೊಂದಿದ್ದರು. ಬಾಧಿತ ವೈದ್ಯೆ ಕಳೆದ 7 ವರ್ಷಗಳಿಂದ ದಹೀನಾ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಇನ್ನು, ಆರೋಪಿ ಡಾ. ರಣಬೀರ್ ರಾಜಸ್ಥಾನದ ಬೋಧಿ ಬವಾಲ್ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್ ಹೊಂದಿದ್ದಾರೆ.
ಬುಧವಾರ ದಹೀನಾ ಗ್ರಾಮಕ್ಕೆ ಬಂದಾಗ ಡಾ. ರಣಬೀರ್ ಗೆ ತನ್ನ ವೈದ್ಯ ಸ್ನೇಹಿತೆ ಅನಾರೋಗ್ಯದಿಂದ ಮಲಗಿರುವುದು ತಿಳಿದುಬಂದಿದೆ. ಆಗ ಆತ ವೈದ್ಯೆಗೆ ಮತ್ತುಬರಿಸುವ ಔಷಧ ನೀಡಿದ್ದಾನೆ. ತದನಂತರ ಆಕೆ ಅರೆಪ್ರಜ್ಞಾವಸ್ಥೆಗೆ ಜಾರುತ್ತಿದ್ದಂತೆ ಡಾ. ರಣಬೀರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರಲಾಗಿದೆ. ಆರೋಪಿ ವೈದ್ಯ ರಣಬೀರ್ ಘಟನೆಯ ಬಳಿಕ ಪರಾರಿಯಾಗಿದ್ದಾನೆ.












Click it and Unblock the Notifications