'ಭ್ರಷ್ಟ' ನಿತಿನ್ ಗಡ್ಕರಿ ನೆರವಿಗೆ ಮೋದಿ ವಿರೋಧಿ ಗ್ಯಾಂಗ್
ಅಹಮದಾಬಾದ್, ಅ.27: ಭ್ರಷ್ಟಚಾರ ಆರೋಪಗಳಿಗೆ ಸಿಕ್ಕಿ ಹೈರಾಣವಾಗುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯನ್ನು ಕಾಪಾಡಿಕೊಳ್ಳಲು ಬಿಜೆಪಿ ಹಿರಿಯ ತಲೆಗಳು ಶತಾಯಗತಾಯ ಯತ್ನಿಸುತ್ತಿವೆ. ಅದು ಮೋದಿ ವಿರೋಧಿ ಗ್ಯಾಂಗ್ ಎಂಬುದು ಕಹಿ ಸತ್ಯವಾಗಿದೆ.
ಆದಾಗ್ಯೂ ಭ್ರಷ್ಟಚಾರ ಆರೋಪ ಹೊತ್ತಿರುವ ಗಡ್ಕರಿ ಎರಡನೆಯ ಅವಧಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯುವುದು ಅನುಮಾನವಾಗಿದೆ. ಸದ್ಯಕ್ಕೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಹಿರಿಯ ತಲೆಗಳು ಗಡ್ಕರಿಯನ್ನು ರಕ್ಷಿಸುತ್ತಿವೆಯಾದರೂ ಆನಂತರ ಗಡ್ಕರಿ ಸ್ಥಾನ ಡೋಲಾಯಮಾನವಾಗಲಿದೆ. ಅಂದಹಾಗೆ ಗಡ್ಕರಿ ಅವಧಿ ಇದೇ ಡಿಸೆಂಬರ್‌ಗೆ ಮುಗಿಯಲಿದೆ.
ಇದನ್ನು ಯಾವುದೇ ರಾಜನೀತಿ ವಿದ್ಯಾರ್ಥಿಯನ್ನು ಕೇಳಿದರೂ ಹೇಳಬಲ್ಲ. ಅದರಲ್ಲೂ ಮೋದಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸಿಬಿಟ್ಟರೆ ಗಡ್ಕರಿ ಒಬ್ಬರಿಗೇ ಅಲ್ಲ ಅವರನ್ನು ಪೊರೆಯುತ್ತಿರುವ ಮೋದಿ ವಿರೋಧಿ ಗ್ಯಾಂಗ್ ಗೂ ಕಷ್ಟ ಕಷ್ಟ! ಹಾಗಾಗಿ, ಸದ್ಯಕ್ಕೆ ಮೂರನೆಯ ಬಾರಿಗೆ Gujarat CEO ಆಗಿ, ಆ ಬಳಿಕ ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗುಜರಾತಿನ ಹಾಲಿ ಸಿಎಂ ನರೇಂದ್ರ ಮೋದಿಗೆ ಇದು ಅಯಾಚಿತವಾಗಿ ದೊರೆತ ಅವಕಾಶವಾಗಿದೆ.

ನಿತಿನ್ ಗಡ್ಕರಿಯ 'ಪೂರ್ತಿ ಪವರ್ ಎಂಡ್ ಶುಗರ್ ಲಿ' Purtiಯಲ್ಲಿ ಹೂಡಿಕೆ ಮಾಡಿರುವ ವಿವಿಧ ಸಂಸ್ಥೆಗಳ ನಿಧಿ ಮೂಲವನ್ನು ಪತ್ತೆ ಹಚ್ಚುವುದಕ್ಕಾಗಿ ಸಾಂಸ್ಥಿಕ ವ್ಯವಹಾರ ಸಚಿವಾಲಯದ ಬಳಿಕ ಈಗ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ. ಮೇಲ್ನೋಟಕ್ಕೆ 'ಗಡ್ಕರಿದು ನಕಲಿ ವ್ಯವಹಾರ' ಎಂಬ ಮಾತುಗಳು ಸಚಿವಾಲಯದಿಂದ ಕೇಳಿಬರುತ್ತಿವೆ.
ಇಲ್ಲಿ ಮುಖ್ಯವಾಗಿ ಗಡ್ಕರಿ ವ್ಯವಹಾರ ಅಸಲಿ/ನಕಲಿ ಅನ್ನುವುದಕ್ಕಿಂತ ಅವರು ವ್ಯವಹಾರ ನಡೆಸುತ್ತಿದ್ದಾರೆ ಎಂಬುದು ಸತ್ಯ. ಜನಸೇವೆ ಧ್ಯೇಯೋದ್ದೇಶದ, ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಹಿರಿಯ ನಾಯಕರಾದ ವಾಜಪೇಯಿ/ಅಡ್ವಾಣಿ ಮುಂತಾದವರು ಹೀಗೆ ವ್ಯವಹಾರ ನಡೆಸಿಯೇ ಪಕ್ಷವನ್ನು ಮುನ್ನಡೆಸಿದರಾ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಆದರೆ ಆ ಇಬ್ಬರನ್ನೂ ಹಾಳು ಮಾಡಿದ್ದು ಅವರ ನಂತರ ಪಕ್ಷದಲ್ಲಿ ಕಾಣಿಸಿಕೊಂಡ ಮಹಾಮಹಿಮ ವ್ಯವಹಾರಸ್ಥರೇ ಎಂಬುದೂ ಬಿಜೆಪಿಯ ದುಃಸ್ಥಿಗೆ ಹಿಡಿದ ಕನ್ನಡಿಯಾಗಿದೆ. ಈ Party Fund Riser ಗಳಿಂದಾಗಿ ಪಕ್ಷಕ್ಕೆ ಕಳಂಕ ಬಂದಿದ್ದು ಮತ್ತು ಪಕ್ಷ ಹಳ್ಳಹಿಡಿದಿದ್ದು ಎಂಬುದನ್ನು ಅದೇ ರಾಜನೀತಿಯ ವಿದ್ಯಾರ್ಥಿಗಳು ಚೆನ್ನಾಗಿ ಅರಿತುಕೊಂಡಿದ್ದಾರೆ.












Click it and Unblock the Notifications