ಬಾರ್ ಗರ್ಲ್ಸ್ ರೇಪ್ : ಮಹಿಳೆ ಸೇರಿ 9 ಜನರ ಬಂಧನ

ಕೇವಲ ಮೂರೇ ದಿನಗಳಲ್ಲಿ, ಮಹಿಳೆಯರನ್ನು ಬೆಚ್ಚಿಬೀಳಿಸಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅತ್ಯಾಚಾರ ಎಸಗಿದ ಗ್ಯಾಂಗ್‌ನ ಪ್ರಮುಖ ಆರೋಪಿ ಗಿರೀಶ ಎಂದು ಹೇಳಲಾಗಿದ್ದು, ಆರೋಪಿಗಳು ಬೆಂಗಳೂರಿನ ಮಾಗಡಿ ರಸ್ತೆ ಮತ್ತು ಸುಂಕದಕಟ್ಟೆಯಲ್ಲಿ ವಾಸಿಸುವವರು. ಆದರೆ ಗಿರೀಶ ಮಾತ್ರ ಯುವತಿಯರ ಮನೆಯ ಮೇಲೆ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಿರೀಶ್, ಜಾಕಿ, ನಾಗೇಶ್, ಪ್ರಸನ್ನ, ಸಂಜಯ್, ಶಿವಕುಮಾರ್, ಕಿರಣ್, ವಿಶ್ವನಾಥ್, ಸುಧಾ ಬಂಧಿತರು.
ಆರೋಪಿಗಳ ಬಂಧನವೂ ಸಿನಿಮೀಯ ರೀತಿಯಲ್ಲಿ ಜರುಗಿದೆ. ಈ ಪ್ರಕರಣದ ತನಿಖೆಗೆಂದು ಕೆಂಗೇರಿ ಬಳಿಯ ರಿಂಗ್ ರಸ್ತೆಯಲ್ಲಿರುವ ಈ ಪ್ರದೇಶಕ್ಕೆ ಪೊಲೀಸರು ಬಂದಿದ್ದಾಗ, ಪ್ರಮುಖ ಆರೋಪಿ ಗಿರೀಶನೂ ತನಿಖೆ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂದು ಅವಲೋಕಿಸುತ್ತಿದ್ದ. ಅಲ್ಲಿಯೇ ಸುತ್ತಾಡುತ್ತಿದ್ದ ಆತನ ಮೇಲೆ ಅನುಮಾನ ಬರುತ್ತಿದ್ದಂತೆ, ತನಿಖೆಯ ದಿಕ್ಕನ್ನು ಬದಲಿಸಿದ ಪೊಲೀಸರು ಗಿರೀಶನ ಚಲನವಲನಗಳನ್ನು ಗಮನಿಸಲು ಶುರು ಮಾಡಿದ್ದಾರೆ. ಅನುಮಾನ ಗಟ್ಟಿಯಾಗುತ್ತಿದ್ದಂತೆ ಗಿರೀಶನನ್ನು ಬಂಧಿಸಿ, ನಂತರ ಆತನ ಮುಖಾಂತರ ಓರ್ವ ಮಹಿಳೆ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕ್ಯಾಸಿನೋ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಬಾರ್ ಗರ್ಲ್‌ಗಳಾಗಿ ಕೆಲಸ ಮಾಡುತ್ತಿದ್ದ ಯುವತಿಯರು ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮೂಲದವರಾಗಿದ್ದು, ಅವರನ್ನು ಆರೋಪಿಗಳು ಕೆಲದಿನಗಳಿಂದ ಹಿಂಬಾಲಿಸುತ್ತಿದ್ದರು ಮತ್ತು ಅವರು ಯಾವ ಸಮಯಕ್ಕೆ ಮನೆಸೇರುತ್ತಾರೆ ಎಂದೆಲ್ಲ ವಿವರ ಕಲೆಹಾಕುತ್ತಿದ್ದರು. ಅ.20ರಂದು ಸಮಯ ನೋಡಿ, ಮೂವರು ಯುವತಿಯರನ್ನು ಬಲಾತ್ಕಾರ ಮಾಡಿದ್ದಲ್ಲದೆ, ಅವರ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗಿದ್ದರು.
ಈ ಆರೋಪಿಗಳನ್ನು ಬಾರಿನಲ್ಲಿ ಯಾವತ್ತೂ ನೋಡಿದ್ದಿಲ್ಲ ಎಂದು ಅತ್ಯಾಚಾರಕ್ಕೊಳಗಾಗಿರುವ ಯುವತಿಯರು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಅವರ ಮತ್ತು ಬಾರ್ ಮಾಲಿಕರ ಹೇಳಿಕೆಗಳನ್ನು ಪಡೆದುಕೊಂಡ ನಂತರ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಪೊಲೀಸರ ತಂಡ ರಚಿಸಿ ತನಿಖೆ ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ, ಇದೇ ಲೇಔಟ್ ಬಳಿಯಿರುವ ಜ್ಞಾನಭಾರತಿ ಆವರಣದಲ್ಲಿ ಓರ್ವ ನೇಪಾಳಿ ಯುವತಿಯರ ಮೇಲೆ 8 ಜನರು ಅತ್ಯಾಚಾರವೆಸಗಿದ್ದರು. ಅವರೆಲ್ಲರನ್ನು ಬಂಧಿಸಲಾಗಿದೆ.












Click it and Unblock the Notifications