ಇದು ನಿಜ, ಆ ವ್ಯಕ್ತಿಯ ಬಳಿ 350 ಕೆಜಿ ವಜ್ರ ಇತ್ತು!

ಈಗ ಕೇಳಿ ನಮ್ಮೀ ಭೂಮಿಯ ಮೇಲೆಯೇ ಒಬ್ಬ ಮಹಾರಾಜನ ಬಳಿ ಬರೋಬ್ಬರಿ 350 ಕೆಜಿ ತೂಕದಷ್ಟು ವಜ್ರವಿತ್ತು. ಇಂತಿಪ್ಪ ರಾಜ ಬರೀ ವಜ್ರ ಏಕಿಟ್ಟುಕೊಂಡಿರುತ್ತಾನೆ. ಜತೆಗಿರಲಿ ಅಂತ ಒಂದಷ್ಟು ಚಿನ್ನಾಭರಣವೂ ಇತ್ತು. ಇನ್ನು ಚರಾಸ್ತಿಯಂತೂ ಲೆಕ್ಕವೇ ಇಲ್ಲ. ಹಾಗಾಗಿ ನಿಸ್ಸಂಶಯವಾಗಿ ಆ ಮಹಾರಾಜನೇ ಭಾರತದ ಸಾರ್ವಕಾಲಿಕ ಸ್ಥಿತಿವಂತ ಎಂದು ಗುರುತಿಸಬಹುದು.
ಯಾರಪ್ಪಾ ಆ ಮಹಾರಾಜ ಅಂದರೆ ಬೆಂಗಳೂರಿನಿಂದ 565 ಕಿಮೀ ದೂರದಲ್ಲಿರುವ ಹೈದರಾಬಾದಿನ ಕೊನೆಯ ನಿಜಾಮ ಉಸ್ಮಾನ್ ಅಲಿ ಖಾನ್....,. 236 ಶತಕೋಟಿ ಡಾಲರ್ (12,98,000 ಕೋಟಿ ರೂ.) ಮೊತ್ತದ ಸಂಪತ್ತು ಹೊಂದಿದ್ದ ಇವರು ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಕೋಳಿ ಮೊಟ್ಟೆಯಾಕಾರದ ಮೇಜುಗುಂಡುಗಳನ್ನು ಈತ ಬಳಸುತ್ತಿದ್ದ. ಅವುಗಳ ವಿಶೇಷವೇನೆಂದರೆ ಅವು ಅಪಟ್ಟ ವಜ್ರದ್ದಾಗಿದ್ದವು.
ಕುತೂಹಲಕ್ಕಾಗಿ ಹೇಳುವುದಾದರೆ 2012-13 ನೇ ಸಾಲಿನ ಭಾರತ ಬಜೆಟ್ 9,35,685 ಕೋಟಿ ರೂ. ಅಷ್ಟೇ! ಹೈದರಾಬಾದನ್ನು ಆಳಿದ ಅವರು 1967ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ಕುತೂಹಲಕಾರಿ ಸಂಗತಿಯೆಂದರೆ ಟೈಮ್ ಪತ್ರಿಕೆ 1937ರ ಫೆಬ್ರವರಿ 22ರ ಸಂಚಿಕೆಯಲ್ಲೇ (ಚಿತ್ರ ನೋಡಿ) ನಿಜಾಂ ಉಸ್ಮಾನ್ ಅಲಿ ಖಾನ್ ವಿಶ್ವದ ಅತಿ ಶ್ರೀಮಂತ ಎಂದು ವರದಿ ಮಾಡಿತ್ತು.
ಕಲ್ಲಿದ್ದಲು ಗಣಿಗಾರಿಕೆ, ವಿಶಾಲ ವ್ಯಾಪ್ತಿಯಲ್ಲಿದ್ದ ಭೂಮಿಯ ಮೇಲಿನ ಅಪಾರ ತೆರಿಗೆ, ಕೆಜಿಗಳಲ್ಲಿ ತೂಗುತ್ತಿದ್ದ ಚಿನ್ನಾಭರಣ, ವಜ್ರವೈಢೂರ್ಯದ ಕಾಣಿಕೆಗಳು ಈತನ ಆಮದನಿಯನ್ನು ಹೆಚ್ಚಿಸಿತ್ತು. ಕೃಷ್ಣ ನದಿ ತಟದಲ್ಲಿ ಗಣಿಗಾರಿಕೆಯಿಂದ ತೆಗೆಯಲಾಗಿದ್ದ 350 ಕೆಜಿ ವಜ್ರ ಈತನ ಬಳಿಯಿತ್ತು.
ಇಷ್ಟೆಲ್ಲ ಇದ್ದರೂ ಈತ ಸರಳ ಹೀವನ ನಡೆಸಿದ. ಗಮನಾರ್ಹವೆಂದರೆ ತನ್ನ ಸಂಪತ್ತಿನಲ್ಲಿ ಶೇ. 15ಕ್ಕೂ ಹೆಚ್ಚು ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದರು. ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸರಕಾರಕ್ಕೆ ನಿಜಾಮ ಉಸ್ಮಾನ್ ಅಲಿ ಖಾನ್ 2 ಲಾರಿಗಟ್ಟಲೆ ಚಿನ್ನದ ನಾಣ್ಯಗಳನ್ನು ಕಳುಹಿಸಿಕೊಟ್ಟಿದ್ದರು.
14ನೇ ಶತಮಾನದಲ್ಲಿ ಆಫ್ರಿಕದ ದೊರೆಯಾಗಿದ್ದ ಮಾಲಿಯ ಒಂದನೇ ಮನ್ಸ ಮೂಸ ಇತಿಹಾಸದ ಮೊದಲ ಅತಿ ಸಿರಿವಂತ ವ್ಯಕ್ತಿ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ. 400 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದ ಮನ್ಸ ಮೂಸ ಹೊಸ ಸಿರಿವಂತರ ಪಟ್ಟಿ ಪ್ರಕಾರ ಪ್ರಸ್ತುತ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಕಾರ್ಲೋಸ್ ಸ್ಲಿಮ್‌ಗಿಂತ ಹಲವು ಪಟ್ಟು ಹೆಚ್ಚಿನ ಶ್ರೀಮಂತ. ಕಾರ್ಲೋಸ್ ಸ್ಲಿಮ್ ಸಂಪತ್ತು ಕೇವಲ 68 ಶತಕೋಟಿ ಡಾಲರ್. ಪಟ್ಟಿಯಲ್ಲಿ ಅವರದು 22ನೇ ಸ್ಥಾನ.
Celebrity Networth ವೆಬ್‌ಸೈಟ್ ಜಗತ್ತಿನ 25 ಸಾರ್ವಕಾಲಿಕ ಶ್ರೀಮಂತ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಈ ಪಟ್ಟಿಯನ್ನು ತಯಾರಿಸಿದ್ದರೂ ಅದಕ್ಕೆ ಸಿಕ್ಕಿದ್ದು 24 ಸಿರಿವಂತರು ಮಾತ್ರ. ಇತಿಹಾಸದ 1,000 ವರ್ಷಗಳಲ್ಲಿದ್ದ ಸಿರಿವಂತರನ್ನು ಆರಿಸಿ ಪಟ್ಟಿ ತಯಾರಿಸಲಾಗಿದೆ.
ಪಟ್ಟಿಯಲ್ಲಿ ಮಹಿಳೆಯರಿಲ್ಲ. ಇನ್ನು, ಪಟ್ಟಿಯಲ್ಲಿರುವವರ ಪೈಕಿ 3 ಮಾತ್ರ ಈಗ ಬದುಕಿದ್ದಾರೆ. ಅಗ್ರ 24 ಸಿರಿವಂತರಲ್ಲಿ 14 ಮಂದಿ ಅಮೆರಿಕನ್ನರು. ಪಟ್ಟಿಯ ಕೊನೆಯಲ್ಲಿ 82 ವರ್ಷ ಪ್ರಾಯದ ವಾರನ್ ಬಫೆಟ್ ಇದ್ದಾರೆ. 64 ಶತಕೋಟಿ ಡಾಲರ್ ಸಂಪತ್ತು ಹೊಂದಿರುವ ಬಫೆಟ್ ಸಿರಿವಂತರ ಪೈಕಿ ಕಡುಬಡವ!












Click it and Unblock the Notifications