ದುಬೈನಲ್ಲಿ ತಲೆಯೆತ್ತಲಿದೆ ಬೃಹತ್ತಾದ ತಾಜ್ ಮಹಲ್!
ದುಬೈ, ಅ.4: ವಿಶ್ವದ 7 ಅದ್ಭುತಗಳಲ್ಲಿ ಚಿರಸ್ಥಾಯಿ ಹೆಸರು ಪಡೆದಿರುವುದು ಭಾರತದ ಭವ್ಯ ತಾಜ್ ಮಹಲ್. ಆದರೆ ನಮ್ಮೀ ತಾಜ್ ಮಹಲ್ ಖ್ಯಾತಿಗೆ ಈಗ ಧಕ್ಕೆ ಬರುವ ಸಾಧ್ಯತೆಯಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಮ್ಮ ತಾಜ್ ಅನ್ನು ಇಂಚಿಂಚು ಹೋಲುವ ಸುಮನೋಹರ ಕಟ್ಟಡವೊಂದನ್ನು ದುಬೈನಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಆದರೆ ಹೆಸರನ್ನಷ್ಟೇ ಬದಲಿಸಿ ಅದೇ ಸ್ವರೂಪವನ್ನು ಉಳಿಸಿಕೊಂಡು ಈ 'ತಾಜ್ ಅರೇಬಿಯ' ದುಬೈನ ಫಾಲ್ಕನ್ ಸಿಟಿ ಆಫ್ ವಂಡರ್ (Falconcity of Wonders) ತಲೆಯೆತ್ತಲಿದೆ. ಅಂದಹಾಗೆ, ಮುಸ್ಲಿಂ ದೊರೆ ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ನೆನಪಿನಲ್ಲಿ ಆಗ್ರಾದಲ್ಲಿ ಈ ಬೃಹತ್ ತಾಜ ಮಹಲನ್ನು ನಿರ್ಮಿಸಿದ್ದ.

ಗಾತ್ರದಲ್ಲಿ ನಮ್ಮ ತಾಜ್ ಗಿಂತ ಹಲವು ಪಟ್ಟು ದೊಡ್ಡದಾದ ಈ ಪ್ರತಿಕೃತಿಯು Cityscape Global 2012 ಉತ್ಸವದ ವೇಳೆಗೆ ತಲೆಯೆತ್ತಲಿದೆ. ವಾಸ್ತು ಶಿಲ್ಪದ ಹೆಗ್ಗುರುತಾಗಿ ತಾಜ್ ಅರೇಬಿಯ ಸುತ್ತ ಮೊಘಲ್ ಶೈಲಿಯ ವಿಶಾಲ ಹೂದೋಟ ಕೂಡ ನಿರ್ಮಾಣಗೊಳ್ಳಲಿದೆ.
ಯೋಜನೆಯ ಪ್ರಕಾರ 'ತಾಜ್ ಅರೇಬಿಯ' ಸುತ್ತ ಹಲವು ವಸತಿಗೃಹ ಸಂಕೀರ್ಣಗಳು ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣ ನಡೆಯಲಿದೆ. ಇದೂ ಸಹ ಭಾರತದ 'ತಾಜ್ ಮಹಲ್' ನಂತೆ ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ ಎಂಬ ಆಶಯವಿದೆ.
'ತಾಜ್ ಅರೇಬಿಯ' ಸುತ್ತ ಇನ್ನೂ ಹತ್ತು ಹಲವು ವೈಶಿಷ್ಟ್ಯಗಳು ಕಾಣಿಸಿಕೊಳ್ಳಲಿವೆ: ಪಿರಮಿಡ್‌ಗಳು, ತೂಗು ಉದ್ಯಾನಗಳು, ಐಫಲ್ ಟವರ್, ಚೀನಾದ ಮಹಾಗೋಡೆ ಮತ್ತು ಬಾಗಿರುವ ಪಿಸಾಗೋಪುರದ ಪ್ರತಿಕೃತಿಗಳೂ ಕೂಡ ನಿರ್ಮಾಣವಾಗಲಿದೆ ಎಂದು ಫಾಲ್ಕನ್ ಸಿಟಿ ಸಿಇಒ ಮತ್ತು ಅಧ್ಯಕ್ಷ ಸಲೇಂ ಅಲ್ ಮೂಸಾ ಹೇಳಿದ್ದಾರೆ.












Click it and Unblock the Notifications