ಸರಕಾರಿ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಾಯ್ತು

ಹೌದು ಬಿಎಂಟಿಸಿ, ಕೆಎಸ್ಸಾರ್ಟಿಸಿ ಪ್ರಯಾಣ ದರಗಳನ್ನು ಅನುಕ್ರಮವಾಗಿ ಶೇ. 12ರಷ್ಟು ಹಾಗೂ ಬಿಎಂಟಿಸಿ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿದೆ. ಇದು ನಿರೀಕ್ಷಿತವೇ ಆಗಿದ್ದರೂ ಕಳೆದ ತಿಂಗಳು 'ಯಾವುದೇ ಕಾರಣಕ್ಕೂ ಪ್ರಯಾಣ ದರ ಹೆಚ್ಚಿಸಿ, ಜನರ ಮೇಲೆ ಹೊರೆ ಹಾಕುವುದು ತನಗೆ ಸುತರಾಂ ಇಷ್ಟವಿಲ್ಲ' ಎಂದು ಖುದ್ದು ಸಾರಿಗೆ ಸಚಿವ ಅಶೋಕ್ ಅವರೇ ಹೇಳಿದ್ದರಿಂದ ಇಷ್ಟು ಬೇಗ ಪ್ರಯಾಣ ದುಬಾರಿಯಾಗುತ್ತದೆ ಎಂದೆಣೆಸಿರಲಿಲ್ಲ.
ಹಾಗೆ ನೋಡಿದರೆ ಸೆ. 22ರಂದೇ ಬಿಎಂಟಿಸಿ, ಕೆಎಸ್ಸಾರ್ಟಿಸಿ ಪ್ರಯಾಣ ದರ ಏರಿಕೆಗೆ ಸಜ್ಜು ಎಂದು ಮೊದಲ ಬಾರಿಗೆ 'ದಟ್ಸ್ ಕನ್ನಡ' ಎಚ್ಚರಿಸಿತ್ತು.
ಕಳೆದ ತಿಂಗಳು ಕೇಂದ್ರ ಸರಕಾರ ಡೀಸೆಲ್ ಬೆಲೆ ಹೆಚ್ಚಿಸಿದ್ದನ್ನೇ ನೆಪವಾಗಿಟ್ಟುಕೊಂಡು ಮೂರು ದಿನಗಳ ಕಾಲ ಬಿಎಂಟಿಸಿ, ಕೆಎಸ್ಸಾರ್ಟಿಸಿ ನೌಕರರು ಮುಷ್ಕರದಲ್ಲಿ ತೊಡಗಿದ್ದರಿಂದ ಹೆಚ್ಚು ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಟಿಕೆಟ್ ದರವನ್ನು ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಹೆಚ್ಚಿಸಿದೆ.
ನಗರ, ಹೊರವಲಯ, ಸುವರ್ಣ, ಪುಷ್ಪಕ್, ವರ್ತುಲ ರಸ್ತೆ ಸೇವೆ ಬಸ್‌ಗಳ ಮೊದಲ ಎರಡು ಸ್ಟೇಜ್‌ಗಳಿಗೆ ರೂ 1 ಹಾಗೂ ಎರಡಕ್ಕಿಂತ ಹೆಚ್ಚಿನ ಸ್ಟೇಜ್‌ಗಳಿಗೆ ರೂ 2 ಹೆಚ್ಚಿಸಲಾಗಿದೆ. ಅಂದರೆ ಇಂದಿನಿಂದ ಬಿಎಂಟಿಸಿ ಹತ್ತಿದವರು ಕನಿಷ್ಠ 1 ರೂ. ಹೆಚ್ಚು ನೀಡಬೇಕಾಗಿದೆ.
ಇನ್ನು, ದಿನದ ಪಾಸ್‌ಗಳ ಬೆಲೆಯೂ ಏರಿದೆ. ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಸಲಾಗಿಲ್ಲ. ದಿನದ ಪಾಸ್ ಐಡಿ ಕಾರ್ಡ್ ಇದ್ದವರಿಗೆ 45 ರೂ. ಇಲ್ಲ ಅಂದವರಿಗೆ 50 ರೂ ಹೆಚ್ಚಿಸಲಾಗಿದೆ.












Click it and Unblock the Notifications