ಎಸಿ ರೈಲು ದರ, ಸರಕು ಸೇವಾ ದರ ಏರಿಕೆ

ಈ ಸೇವೆಗಳ ದರ ಅಕ್ಟೋಬರ್ 1ರಿಂದ 3.7 ಶೇ.ರಷ್ಟು ಹೆಚ್ಚಲಿದೆ. ಎಸಿ ಪ್ರಥಮ ದರ್ಜೆ, ಎಕ್ಸಿಕ್ಯುಟಿವ್ ದರ್ಜೆ, ಎಸಿ-2 ಟಯರ್, ಎಸಿ-3 ಟಯರ್, ಎಸಿ ಚೇರ್ ಕಾರ್ ಪ್ರಯಾಣ ದರ ಅಕ್ಟೋಬರ್ 1ರಿಂದ 3.708 ಶೇ. ದಷ್ಟು ಹೆಚ್ಚಲಿದೆ ಹಾಗೂ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಎಸಿ ದರ್ಜೆ, ಸರಕು ಸೇವೆ ಮತ್ತು ಪೂರಕ ಸೇವೆಗಳಿಗೆ ಸೇವಾ ತೆರಿಗೆ ವಿಧಿಸುವ ನಿರ್ಧಾರವನ್ನು ರೈಲ್ವೆ ಸಚಿವ ಸಿ.ಪಿ. ಜೋಶಿ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ನಡುವೆ ಗುರುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಅಕ್ಟೋಬರ್ 1 ಅಥವಾ ನಂತರದ ದಿನಾಂಕಗಳಲ್ಲಿ ಪ್ರಯಾಣಿಸುವುದಕ್ಕಾಗಿ ಮುಂಗಡ ಖರೀದಿಸಿದ ಟಿಕೆಟ್‌ಗಳಿಗೆ ಸೇವಾ ತೆರಿಗೆ ಅನ್ವಯಿಸುತ್ತದೆ. ಒಂದು ವೇಳೆ ಮುಂಗಡ ಟಿಕೆಟ್‌ಗಳನ್ನು ಈಗಾಗಲೇ ಖರೀದಿಸಿದ್ದರೆ, ಸೇವಾ ತೆರಿಗೆ ಮೊತ್ತವನ್ನು ಪ್ರಯಾಣದ ವೇಳೆ ಟಿಟಿಇಗಳು ಅಥವಾ ಪ್ರಯಾಣಕ್ಕೆ ಮೊದಲು ಬುಕ್ಕಿಂಗ್ ಕಚೇರಿಗಳು ಸಂಗ್ರಹಿಸುತ್ತವೆ.
ಪ್ರಯಾಣಿಕರು ಟಿಕೆಟ್‌ಗಳನ್ನು ರದ್ದುಪಡಿಸಿದರೆ ರೈಲ್ವೆಯು ಸೇವಾ ತೆರಿಗೆಯನ್ನು ಹಿಂದಿರುಗಿಸುವು ದಿಲ್ಲ ಎಂದು ಅಧಿಕಾರಿ ತಿಳಿಸಿದರು. ರಿಯಾಯಿತಿ ದರದ ಟಿಕೆಟ್‌ಗಳಲ್ಲಿ ಸೇವಾ ತೆರಿಗೆ ಒಟ್ಟು ಪ್ರಯಾಣ ದರದ 30 ಶೇ. ಆಗಿರುತ್ತದೆ.
ಸೇವಾ ತೆರಿಗೆ 12.36 ಶೇ. ಆಗಿರುತ್ತದೆ. ಅದರ ಪೈಕಿ 70 ಶೇ. ಮನ್ನಾ ಮಾಡಿ ಎಸಿ ಮತ್ತು ಸರಕು ಸೇವೆಗಳಿಗೆ 3.708 ಶೇ. ಸೇವಾ ತೆರಿಗೆ ವಿಧಿಸಲಾಗುವುದು.
ಎಸಿ ದರ್ಜೆಯ ಪ್ರಯಾಣಿಕರನ್ನು ಈ ವರ್ಷದ ಜುಲೈ ತಿಂಗಳಿಂದ ಸೇವಾ ತೆರಿಗೆಯ ವ್ಯಾಪ್ತಿಗೆ ತರಲು 2012 ಹಣಕಾಸು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಟಿಎಂಸಿ ವ್ಯಕ್ತಪಡಿಸಿದ ವಿರೋಧದ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಅಮಾನತಿನಲ್ಲಿಡಲಾಗಿತ್ತು.












Click it and Unblock the Notifications