ಸದಾನಂದ ಗೌಡ-ಡಾಟಿ ದಂಪತಿಗೆ ಕೋರ್ಟ್ ಬುಲಾವ್

ಈ ಸಂಬಂಧ ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಅವರು ಇತ್ತೀಚೆಗೆ ಖಾಸಗಿ ದೂರು ದಾಖಲಿಸಿದ್ದರು. ಅವರ ದೂರನ್ನು ವಿಚಾರಣೆಗೆ ಅರ್ಹ ಎಂದು ಪರಿಗಣಿಸಿದ ಲೋಕಾಯುಕ್ತ ನ್ಯಾಯಾಧೀಶ ನ್ಯಾ ಎನ್.ಕೆ. ಸುಧೀಂದ್ರರಾವ್ ಅವರು ಮೇಲ್ನೋಟಕ್ಕೆ ದೂರಿನಲ್ಲಿ ಸತ್ಯಾಂಶವಿದೆ ಅನಿಸುತ್ತದೆ. ಆದ್ದರಿಂದ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದಿದ್ದರು.
ಆನಂತರವೂ ಪ್ರಮಾಣೀಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ನ್ಯಾ ಎನ್.ಕೆ. ಸುಧೀಂದ್ರರಾವ್ ಅವರು ದೂರುದಾರ ನಾಗಲಕ್ಷ್ಮಿ ಬಾಯಿ ಅವರಿಗೆ ಸೂಚಿಸಿದ್ದರು. ಅದರಂತೆ ಪ್ರಮಾಣೀಕೃತ ಅರ್ಜಿ ಸಲ್ಲಿಸಿದ ಬಳಿಕ ಲೋಕಾಯುಕ್ತ ಜಡ್ಜ್ ಸುಧೀಂದ್ರರಾವ್ ಅವರು ಸದಾನಂದ ಗೌಡ ಮತ್ತು ಅವರ ಪತ್ನಿ ಡಾಟಿ ಗೌಡಗೆ ಸಮನ್ಸ್ ಜಾರಿ ಮಾಡಿ ಇಂದು ಆದೇಶ ಹೊರಡಿಸಿದ್ದಾರೆ.
ಜನಪ್ರತಿನಿಧಿಯಾಗಿ ಅಕ್ರಮ ಆಸ್ತಿ ಸಂಪಾದನೆ ಮತ್ತು ಅಧಿಕಾರ ದುರುಪಯೋಗ ಆರೋಪ ಹೊರಿಸಿ ಒಟ್ಟು ಮೂರು ಪ್ರಕರಣಗಳನ್ನು ಸದಾನಂದರ ವಿರುದ್ಧ ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಸೆ. 6ರಂದು ದಾಖಲಿಸಿದ್ದರು.
ಮರೆ ಮಾಚಿರುವ ಆಸ್ತಿ: ಸದಾನಂದಗೌಡ ಅವರು 1998ರಲ್ಲಿ ಪುತ್ತೂರಿನಲ್ಲಿ 10 ಸೆಂಟ್ ನಿವೇಶನವನ್ನು ಅಕ್ರಮವಾಗಿ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಹೊರ ವಲಯದ ಬಾಗಲೂರು ಬಳಿ 7.5 ಗುಂಟೆ ಜಮೀನು ಖರೀದಿಸಿದ್ದಾರೆ. ಇದು ಗೋಮಾಳಕ್ಕೆ ಸೇರಿದ ಭೂಮಿ. ಭೂ ಪರಿವರ್ತನೆ ಮಾಡಿಕೊಳ್ಳದೆಯೇ ಇಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ ಸಂಸದರಾಗಿದ್ದಾಗ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಎಚ್.ಎಸ್.ಆರ್.ಬಡಾವಣೆಯಲ್ಲಿ ತಮ್ಮ ಪತ್ನಿ ಡಾಟಿ ಅವರ ಹೆಸರಲ್ಲಿ ಮನೆ ಹೊಂದಿರುವ ಅಂಶವನ್ನು ಪ್ರಸ್ತಾಪಿಸಿಲ್ಲ. ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಧಿಕಾರ ಎಂದು ದೂರಿದ್ದಾರೆ.


Click it and Unblock the Notifications
