ಅಗ್ನಿಗೆ ಪ್ರೀತಿಯಾದ ಅಯೂಬ್ ಶ್ರುತಿ ಪ್ರೇಮ

ಈ ದುರ್ಘಟನೆ ಬಗ್ಗೆ ಕೊವೈ ಪೊಲೀಸರು ಹೇಳಿದ್ದು ಹೀಗೆ: ಕಳಪಟ್ಟಿ ಎಂಬ ಊರಿನ ನಿವಾಸಿಯಾದ ಅಯೂಬ್ ಅವರ ಪುತ್ರ ಅಜೀಂ ಅಜ್ಮಲ್ (21) ತನ್ನ ಸಹಪಾಠಿ ಗೆಳತಿ ಶ್ರುತಿ ಮೆನನ್ ವಾಸವಿದ್ದ ಭವ್ಯವಾದ ಮನೆಗೆ ತೆರಳಿದ್ದಾನೆ.
ಗುರುತು ಪರಿಚಯವಿದ್ದ ಹುಡುಗನಾದ್ದರಿಂದ ಶ್ರುತಿ ತಾಯಿ ಲತಾ(48) ಅಜ್ಮಲ್ ನನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ.
ಶ್ರುತಿ ಇದ್ದ ರೂಮಿಗೆ ಹೋದ ಅಜ್ಮಲ್ ಹೋಗಿದ್ದಾನೆ. ಲತಾ ಅಡುಗೆ ಮನೆ ಕಡೆಗೆ ತೆರಳಿದ್ದಾರೆ. ಆದರೆ, ಕೆಲ ಹೊತ್ತಿನ ನಂತರ ಶ್ರುತಿ ಇದ್ದ ರೂಮಿನಿಂದ ಚೀರಾಟ, ಅರಚಾಟ ಕೇಳಿಸಿದೆ.
ಗಾಬರಿಗೊಂಡ ಲತಾ, ಅತ್ತ ಕಡೆಗೆ ಸಾಗಿದ್ದಾರೆ. ಕೈಲಿ ಚಾಕು ಹಿಡಿದಿದ್ದ ಶ್ರುತಿಯನ್ನು ಚುಚ್ಚಲು ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿದೆ.
ಹೌಹಾರಿದ ಲತಾ ತಮ್ಮ ಮಗಳಿಗೆ ರಕ್ಷಣೆ ನೀಡಲು ಹೋಗಿದ್ದಾರೆ. ಅದರೆ, ಲತಾ ಅವರಿಗೂ ಹಲವು ಬಾರಿ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ ಅಜ್ಮಲ್ ನಂತರ ಶ್ರುತಿಯನ್ನು ಹಾಲ್ ನಲ್ಲಿದ್ದ ಸೋಫಾದಲ್ಲಿ ಕೆಡವಿ ಆಕೆ ಮೇಲೆ ಸೀಮೆಎಣ್ಣೆ ಸುರಿದಿದ್ದಾನೆ.
ನಂತರ ತನ್ನ ಮೇಲೂ ಸೀಮೆಎಣ್ಣೆ ಸುರಿದು ಕೊಂಡು ನನಗೆ ಸಿಗದ ಪ್ರೇಮ ಇಲ್ಲಿ ನಾಶವಾಗಲಿ ಎಂದು ಬೆಂಕಿ ಹಚ್ಚಿದ್ದಾನೆ.
ಈ ದುರ್ಘಟನೆ ನಡೆದಾಗ ಶ್ರುತಿಯ ಅಜ್ಜ ಬಿಬಿ ಮೆನನ್ ಅವರು ಮನೆಯ ಮತ್ತೊಂದು ಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸಂಜೆ ವೇಳೆ ಚಹಾ ಸೇವಿಸಿ ನಂತರ ಊರುಗೋಲು ಸಹಾಯದಿಂದ ವಾಕಿಂಗ್ ಹೋಗುವ ಅಭ್ಯಾಸವಿದ್ದರಿಂದ ಚಹಾಗಾಗಿ ಕಾಯುತ್ತಾ ಕುಳಿತ್ತಿದ್ದಾರೆ.
ನಡು ಮನೆಯಲ್ಲಿ ಚೀರಾಟ ಕೇಳಿಸಿದರೂ ಬೇಗನೆ ಸ್ಥಳಕ್ಕೆ ಬರಲು ಶಕ್ತಿ ಇಲ್ಲದೆ ಅಜ್ಜ ನಿಧಾನವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬಂದು ನೋಡಿದರೆ, ಲತಾ ಪ್ರಜ್ಞಾಶೂನ್ಯರಾಗಿರುವುದು ಕಂಡು ಬಂದಿದೆ. ಇನ್ನೊಂದು ಬದಿಯಲ್ಲಿ ಶ್ರುತಿ ಹಾಗೂ ಹುಡುಗನೊಬ್ಬನ ದೇಹ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.
ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಲತಾ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ ಸುಮಾರು 9 ಬಾರಿ ಲತಾ ಅವರಿಗೆ ಚುಚ್ಚಿದ ಗುರುತುಗಳು ಕಂಡುಬಂದಿದೆ. ಸದ್ಯಕ್ಕೆ ಆಕೆ ಕೋಮಾ ಸ್ಥಿತಿಯಲ್ಲಿದ್ದಾರೆ.
ಪೆರೂರು ಡಿಎಸ್ಪಿ ಷಣ್ಮುಗಂ ಹಾಗೂ ವಡಪಳ್ಳಿ ಇನ್ಸ್ ಪೆಕ್ಟರ್ ವಿ ಭಾಸ್ಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಜ್ಮಲ್ ಅವರ ಗೆಳಯರನ್ನು ಕರೆಸಿ ಪೊಲೀಸರು ಒಂದು ಸುತ್ತಿನ ವಿಚಾರಣೆ ನಡೆಸಿದ್ದಾರೆ.
ಪಿಎಸ್ ಜಿ ಕಾಲೇಜಿನಲ್ಲಿ ಇಬ್ಬರು ಬಿಬಿಎಂ ಮುಗಿಸಿದ ಮೇಲೆ ಜಿಆರ್ ಡಿ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಶ್ರುತಿ ತಂದೆ ರಾಜೀವ್ ಮೆನನ್ ದೆಹಲಿ ಮೂಲದ ಉದ್ಯಮಿ ಎಂದು ತಿಳಿದು ಬಂದಿದೆ. ಅಜ್ಮಲ್ ಹಾಗೂ ಶ್ರುತಿ ನಡುವೆ ನಿಜವಾದ ಪ್ರೇಮವಿತ್ತಾ? ಅಜ್ಮಲ್ ಒನ್ ಸೈಡ್ ಲವ್ ಆಗಿತ್ತಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications