ಮತ್ತೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಹೆಚ್ಚಳ ನಿಶ್ಚಿತ

ಈ ಬೆಲೆ ವೈಪರೀತ್ಯದ ಬಗ್ಗೆ ಸುಳಿವು ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ತೈಲೋತ್ಪನ್ನ ಕಂಪನಿಗಳಿಗೆ ಸಬ್ಸಿಡಿ ನೀಡಲು ತನ್ನ ಬಳಿ ಹಣವಿಲ್ಲ. ಹೀಗಾಗಿ ಕಂಪನಿಗಳು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳಕ್ಕೆ ಮುಂದಾಗಿವೆ ಎಂದು ಹೇಳಿದೆ. 'ತೈಲೋತ್ಪನ್ನಗಳ ಬೆಲೆ ಹೆಚ್ಚಳವಂತೂ ನಿಶ್ಚಿತ. ಅದನ್ನು ತಡೆಯುವ ಮಾತೇ ಇಲ್ಲ' ಎಂದು ಇಂಧನ ಸಚಿವಾಲಯದ ಉನ್ನತಾಧಿಕಾರಿಯೊಬ್ಬರೂ ಹೇಳಿದ್ದಾರೆ.
ಕೇಂದ್ರದ ಜಾಣ್ಮೆಯ ಲೆಕ್ಕಾಚಾರ: ಆದರೆ ಈಗಾಗಲೇ ಸಂಸತ್ ಅಧಿವೇಶಕ್ಕೆ ಕಲ್ಲಿದ್ದಲು ಕೊಳ್ಳಕಿಯಿಟ್ಟಿದೆ. ಈಗ ಮತ್ತೆ ಪೆಟ್ರೋಲ್, ಡೀಸೆಲ್ ಸಹ ಅದಕ್ಕೆ ತುಪ್ಪ ಸುರಿಯುವುದು ಬೇಡ. ಹಾಗಾಗಿ ಪ್ರಸಕ್ತ ಮುಂಗಾರು ಅಧಿವೇಶನ ಶುಕ್ರವಾರಕ್ಕೆ ಮುಗಿಯುತ್ತಿದ್ದಂತೆ ಎಂದಿನಂತೆ ಅಂದಿನ ಮಧ್ಯರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ಬೆಲೆಯೇರಿಸಿದರೆ ಆಯಿತು ಎಂಬುದು ಕೇಂದ್ರದ ಜಾಣ್ಮೆಯ ಲೆಕ್ಕಾಚಾರವಾಗಿದೆ.
ಆದರೆ ಇದರಿಂದ ಜನಸಾಮಾನ್ಯದ ದೈನಂದಿನ ಲೆಕ್ಕಾಚಾರವಂತೂ ಏರುಪೇರಾಗುವುದು ಖಚಿತ.
2011ರ ಜೂನ್ ನಲ್ಲಿ ಡೀಸೆಲ್, ಗೃಹ ಬಳಕೆ ಅನಿಲ ಮತ್ತು ಸೀಮೆಎಣ್ಣೆಯ ಬೆಲೆಗಳನ್ನು ಏರಿಸಲಾಗಿತ್ತು. ಅಲ್ಲಿಂದೀಚೆಗೆ ಇವುಗಳ ಉತ್ಪಾದನೆ ವೆಚ್ಚ ಶೇ. 30ರಷ್ಟು ಹೆಚ್ಚಿದೆ. ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ದಿನಕ್ಕೆ 560 ಕೋಟಿ ರೂ. ನಷ್ಟವನ್ನನ್ನುಭವಿಸುತ್ತಿವೆ. ಪೆಟ್ರೋಲಿನದೂ ಅದೇ ಕಥೆ. ಲೀಟರಿಗೆ 5 ರೂಪಾಯಿ ನಷ್ಟವಾಗುತ್ತಿವೆ ಎಂದು ಕಂಪನಿಗಳು ಬೊಂಬಡಾ ಹೊಡೆಯುತ್ತಿವೆ.
2010ರ ಜೂನಿನಲ್ಲಿ ಪೆಟ್ರೋಲ್ ಬೆಲೆ ನಿಯಂತ್ರಣವನ್ನು ಮುಕ್ತಗೊಳಿಸಿದ ಬಳಿಕ ಪೆಟ್ರೋಲ್ ಉತ್ಪಾದನೆ ವೆಚ್ಚಕ್ಕೆ ತಕ್ಕಂತೆ ಅದರ ರೀಟೇಲ್ ಬೆಲೆ ಹೆಚ್ಚಳವಾಗಿಲ್ಲ ಎಂದು ಕಂಪನಿಗಳು ಅಲವತ್ತುಕೊಂಡಿವೆ. 2012ರ ಮಾರ್ಚ್ ಅಂತ್ಯಕ್ಕೆ ಮೂರು ತೈಲ ಕಂಪನಿಗಳು 1,92,951 ಕೋಟಿ ರೂ. ನಷ್ಟ ನುಭವಿಸುವ ನಿರೀಕ್ಷೆಯಿದೆ.












Click it and Unblock the Notifications