ದೇಶಾದ್ಯಂತ 40 ಸಾವಿರ ಬ್ಯಾಂಕ್ ಹುದ್ದೆ ಖಾಲಿಯಿವೆ!

ಹಣಕಾಸು ಸಹಾಯಕ ಸಚಿವ ನಮೋ ನಾರಾಯಣ ಮೀನ ಅವರು ನಿನ್ನೆ ಗುರುವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಿಂದ ಈ ಅಂಶ ಬೆಳಕಿಗೆ ಬಂದಿದೆ. ಆದರೆ ಪ್ರಸ್ತುತ ಬ್ಯಾಂಕಿಂಗ್ ಸೇವಾ ನೇಮಕಾತಿ ಮಂಡಳಿಯ ನೇಮಕಾತಿ ವಿಧಾನದಲ್ಲಿ ಯಾವುದೇ ಬದಲಾವಣೆ ತರುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆನರಾ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಯಿಲ್ಲ:
ಗಮನಾರ್ಹವೆಂದರೆ ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ಹುದ್ದೆಗಳು ಖಾಲಿ ಬಿದ್ದಿಲ್ಲ ಎಂದು ಸಚಿವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಖಾಲಿ ಇರುವ ಹುದ್ದೆಗಳಿಗೆ ನೇಮಕವನ್ನು ಮಾಡಿಕೊಳ್ಳುತ್ತಾ ಬರುತ್ತಿವೆ. ಬ್ಯಾಂಕಿಂಗ್ ವೈಯಕ್ತಿಕ ಆಯ್ಕೆ ಸಂಸ್ಥೆ (ಐಬಿಪಿಎಸ್) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಬ್ಯಾಂಕ್‌ಗಳು ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ ಎಂದವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ವ್ಯವಹಾರ ಗಾತ್ರ ಹಾಗೂ ಬೆಳವಣಿಗೆಯನ್ನು ಪರಿಗಣಿಸಿ, ಆಯಾಯ ಬ್ಯಾಂಕ್‌ಗಳು ನೇಮಕಾತಿಯನ್ನು ನಡೆಸುತ್ತವೆ. ಬ್ಯಾಂಕ್‌ಗಳಿಗೆ ಮಂಜೂರಾಗಿರುವ ಹುದ್ದೆಗಳು, ನೌಕರರ ನಿವೃತ್ತಿ ಮತ್ತಿತರ ವಿಚಾರಗಳ ಆಧಾರದಲ್ಲಿ ಈ ನೇಮಕಾತಿಗಳು ನಡೆಯುತ್ತವೆ ಎಂದು ಮೀನ ತಿಳಿಸಿದರು.
ಯುಕೋ ಬ್ಯಾಂಕ್‌ನಲ್ಲಿ 3,747, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,854, ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,802 ಹಾಗೂ ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್‌ನಲ್ಲಿ 2,500 ಅಧಿಕಾರಿ ಮಟ್ಟದ ಹುದ್ದೆಗಳು ಖಾಲಿಯಾಗಿವೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3,615, ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,267, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 1,497 ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,251 ಗುಮಾಸ್ತ ಹುದ್ದೆಗಳು ಖಾಲಿ ಬಿದ್ದಿವೆ.












Click it and Unblock the Notifications