ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಚಿನಲ್ಲಿ ಯುವಜೋಡಿ ಮೇಲೆ ಲೈಂಗಿಕ ದೌರ್ಜನ್ಯ

By Srinath
|
Google Oneindia Kannada News

srikakulam-beach-youth-thrashed-girlfriend-stripped
ಶ್ರೀಕಾಕುಳಂ, ಜುಲೈ, 30: ಇತ್ತ ಮಂಗಳೂರಿನಲ್ಲಿ ಮನೆಯಲ್ಲಿ ನಡೆಯತ್ತಿದ್ದ ವೀಕೆಂಡ್ ಪಾರ್ಟಿ ಮೇಲೆ ದಾಳಿ ನಡೆಸಿದ ಗುಂಪು ಅಲ್ಲಿದ್ದ ಯುವಕ/ಯುವತಿಯರ ಮೇಲೆ ಹಲ್ಲೆ ನಡೆಸಿದ್ದರೆ ಅತ್ತ ನೆರೆಯ ಆಂಧ್ರದಲ್ಲಿ ಬೀಚಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಯುವ ಪ್ರೇಮಿಗಳ ಮೇಲೆ ಪುಂಡರ ಗುಂಪೊಂದು ದಾಳಿ ನಡೆಸಿ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದೆ.

ಶನಿವಾರ ರಜಾ ಮೂಡಿನಲ್ಲಿ ಇಲ್ಲಿನ ಭಾವನಪಾಡು ಬೀಚಿನಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಯುವ ಜೋಡಿಯ ಮೇಲೆ ಹಠಾತ್ತನೇ ದಾಳಿ ನಡೆಸಿದ ನಾಲ್ಕು ಮಂದಿ ದುರುಳರು ಯುವಕನ ಮೇಲೆ ಹಲ್ಲೆ ಮಾಡಿ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಯುವತಿಯ ಬಟ್ಟೆ ಹರಿದು ಆಕೆಯ ಮೇಲೆ ಮಾನಭಂಗಕ್ಕೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಸಮೀಪದ ಭಾವನಪಾಡು ಗ್ರಾಮದವರು ಎನ್ನಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಯಲ್ಲಿ ಈ ಯುವ ಜೋಡಿ ಬೀಚಿನಲ್ಲಿ ಅಶ್ಲೀಲ ಭಂಗಿಯಲ್ಲಿ ಸಲ್ಲಾಪದಲ್ಲಿ ತೊಡಗಿರುವುದು ಈ ಗುಂಪಿನ ಕಣ್ಣಿಗೆ ಬಿದ್ದಿದೆ. ತಕ್ಷಣ ನಾಲ್ವರು ಆರೋಪಿಗಳ ಪೈಕಿ ದೂರ್ವಾಸುಲು ಎಂಬುವವನು ತನ್ನ ಮೊಬೈಲ್ ಮೂಲಕ ಆ ಜೋಡಿಯ ಸಲ್ಲಾಪವನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ.

ನಂತರ ಜೋಡಿಯ ಮೇಲೆ ಮುಗಿಬಿದ್ದ ಗುಂಪು, ಯುವಕನನ್ನು ಥಳಿಸಿದೆ. ಯುವಕನನ್ನು ಮರಕ್ಕೆ ಕಟ್ಟಿ ಹಾಕಿದ ಗುಂಪು ಯುವತಿಯ ಮೇಲೆ ಮಾನಭಂಗ ಮಾಡಲು ಯತ್ನಿಸಿತು ಎಂದು ಬೀಚಿನಲ್ಲಿದ್ದವರು ಹೇಳಿದ್ದಾರೆ. ಇದನ್ನು ಕಂಡ ಗ್ರಾಮದ ಮಹಿಳೆಯರು ಯುವತಿಯ ರಕ್ಷಣೆಗೆ ಬಂದಿದ್ದಾರೆ. ಆ ವೇಳೆ ಧೈರ್ಯ ತಂದುಕೊಂಡ ಬಾಧಿತ ಯುವಕನೂ ತನ್ನ ಪ್ರೇಮಿಯ ರಕ್ಷಣೆಗೆ ಧಾವಿಸಿದ್ದಾನೆ.

'ಪುಂಡರ ಗುಂಪು ತನ್ನ ಬಟ್ಟೆ ಕಿತ್ತುಹಾಕುತ್ತಿದ್ದಂತೆ ಯುವತಿಯು ರಕ್ಷಣೆಗಾಗಿ ಕಿರುಚಿಕೊಳ್ಳುತ್ತಾ ಗ್ರಾಮದ ಕಡೆಗೆ ಓಡಿದ್ದಾಳೆ. ಬಳಿಕ ಗ್ರಾಮಸ್ಥರೂ ಅವರ ರಕ್ಷಣೆಗೆ ಬಂದರು' ಎಂದು ಘಟನೆಯನ್ನು ಕಂಡ ಮಹಿಳೆಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಯುವತಿಯ ರೋಧನ ಕಂಡು ಸ್ಥಳಕ್ಕೆ ಓಡಿಬಂದ ಗ್ರಾಮಸ್ಥರು ಆರೋಪಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ ಆರೋಪಿಗಳು ಆ ವೇಳೆಗೆ ಸಮೀಪದ ಕಿರು ಅರಣ್ಯ ಪ್ರದೇಶದೊಳಕ್ಕೆ ನುಸುಳಿದ್ದರು. ಆದರೂ ರವಿಕುಮಾರ್ ಎಂಬ ಯುವಕನನ್ನು ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಆರೋಪಿ ರವಿಕುಮಾರ ಈ ಹಿಂದೆಯೂ ಬೀಚಿಗೆ ಬರುವ ಜೋಡಿಗಳ ಮೇಲೆ ಹೀಗೆ ಲೈಂಗಿಕ ದೌರ್ಜನ್ಯ ನಡೆಸಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಯುವ ಪ್ರೇಮಿಗಳು ತಮ್ಮ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂದು ಗ್ರಾಮಸ್ಥರಿಗೆ ತಾಕೀತು ಮಾಡಿದ್ದಾರೆ. ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹಿರಿಯ ಗ್ರಾಮಸ್ಥರ ಮುಂದೆ ಅಲವತ್ತುಕೊಂಡಿದ್ದಾರೆ.

English summary
Srikakulam Bhavanapadu beach youth thrashed girlfriend stripped. Four men thrashed a youth and stripped his girlfriend in an attempt to rape her on Saturday (July 30).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X