ಭಾರತೀಯರಿಗಾಗಿ ಯುಎಸ್ ವೀಸಾ ನಿಯಮ ಸಡಿಲಿಕೆ

ನೂತನ ನಿಯಮ ಸಡಿಲಿಕೆಯನ್ವಯ, ಸೆಕ್ಷನ್ 221ಜಿ ಅಡಿಯಲ್ಲಿ ವೀಸಾ ಅರ್ಜಿಯು ವಿವಿಧ ಕಾರಣಗಳಿಗಾಗಿ ಬಾಕಿಯಿರಿಸಲಾಗಿರುವ ಅಥವಾ ತಡೆಹಿಡಿಯಲ್ಪಟ್ಟಿದ್ದಲ್ಲಿ ಅಂತಹ ಅಭ್ಯರ್ಥಿಯು ಮತ್ತೊಮ್ಮೆ ವೀಸಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ನೂತನ ವೀಸಾ ಸಡಿಲಿಕೆ ನಿಯಮದ ಅನ್ವಯ ಭಾರತದ ಮುಂಬೈಯಲ್ಲಿ ಅಮೆರಿಕದ ಕನ್ಸಾಲೇಟ್ ಕಚೇರಿಯು ಈ ಸಂಬಂಧ 40 ಕಿಯೋಸ್ಕ್ ಗಳನ್ನು ತೆರೆದಿದೆ. ಇದರಿಂದ ವೀಸಾ ಅಧಿಕಾರಿಯೊಂದಿಗೆ ಸಂದರ್ಶನಕ್ಕೆ ಕಾಯಬೇಕಿದ್ದ ಅವಧಿಯು ಸುಮಾರು ಮೂರು ತಾಸುಗಳಿಂದ ಒಂದು ತಾಸಿಗೆ ಇಳಿಯಲಿದೆ.
ಕೆಲವು ಅನಿರೀಕ್ಷಿತ ಪ್ರಯಾಣದ ಸಂದರ್ಭಗಳಲ್ಲಿ ಭಾರತೀಯರಿಗೆ ಅನುಕೂಲವಾಗುವಂತೆ ಅಮೆರಿಕದ ರಾಜತಾಂತ್ರಿಕ ಕಚೇರಿಯು ಕೆಲವು ತುರ್ತು ಕಾರ್ಯ ಯೋಜನೆಯನ್ನೂ ಹೊಂದಿದೆ.
ವೀಸಾ ಪಡೆಯಲು ಅಗತ್ಯವಾಗಿರುವ ದಾಖಲೆಗಳಿಗೆ ಋಜುವಾತು ಮುದ್ರೆ ಹಾಗೂ ಪತ್ರಗಳನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಮಾಡಲಾಗುವುದು.
ವೀಸಾ ಪಡೆಯಲು ಉತ್ಸುಕರಾಗಿರುವವರು ಇನ್ನುಮುಂದೆ ತಮ್ಮ ಪತ್ರಗಳನ್ನು ಈ ಕೆಳಕಂಡ ವಿಳಾಸದಲ್ಲಿ ಅಧಿಕೃತಗೊಳಿಸಿಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಳಾಸ ಹೀಗಿದೆ: ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, 2ನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಎಚ್. ರಸ್ತೆ, ಶಾಂತಿನಗರ, ಬೆಂಗಳೂರು.
ಇನ್ನೊಂದೆಡೆ ಎಚ್ 1 ಬಿ ಮತ್ತು ಎಲ್ 1 ವೀಸಾಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿರುವುದು 2021ರ ಸೆಪ್ಟೆಂಬರ್ 30 ವರೆಗೂ ವಿಸ್ತರಣೆಯಾಗಲಿದೆ. ಹೊರಗುತ್ತಿಗೆ ಕಂಪನಿಗಳಾದ ವಿಪ್ರೋ, ಟಾಟಾ, ಇನ್ಫೋಸಿಸ್, ಮಹೀಂದ್ರಾ ಸತ್ಯಂ ಕಂಪನಿಗಳಿಗೆ ಹೊಡೆತ ಬೀಳಲಿದೆ. ಆದರೆ, ಮೈಕ್ರೋಸಾಫ್ಟ್, ಆರೇಕಲ್, ಇಂಟೆಲ್, ಆಪಲ್ ಮುಂತಾದ ಕಂಪನಿಗಳು ತೆರಿಗೆ ಹೊರೆಯಿಂದ ಬಚಾವಾಗಿದೆ.
ಯುಕೆ ವೀಸಾ ಕೇಂದ್ರ: ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್ ನಲ್ಲಿ ಯುಕೆ ವೀಸಾ ಕೇಂದ್ರ ಆರಂಭವಾಗಿತ್ತು. ಈ ಕೇಂದ್ರದಲ್ಲಿ ಹೆಚ್ಚುವರಿ 2 ಗಂಟೆಗಳ ಕಾಲ ತನ್ನ ಗ್ರಾಹಕರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ತನಕ ವೀಸಾ ಅರ್ಜಿ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರದ ವಕ್ತಾರರು ಹೇಳಿದ್ದಾರೆ.
ಭಾರತದಿಂದ ಶೇ 30 ರಷ್ಟು ವಿದ್ಯಾರ್ಥಿಗಳು ಯುಕೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಬಯಸಿ ವೀಸಾ ಅರ್ಜಿ ತುಂಬುತ್ತಿದ್ದಾರೆ. ಆದರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳ ಅರ್ಜಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ಇತ್ತೀಚೆಗೆ ಸಮೀಕ್ಷೆಯಿಂದ ತಿಳಿದು ಬಂದಿತ್ತು.












Click it and Unblock the Notifications