ಶೀಘ್ರವೇ ಯುಪಿಎ ಸರಕಾರದ ಚುಕ್ಕಾಣಿ ಹಿಡಿಯುವೆ
ನವದೆಹಲಿ, ಜುಲೈ 19: 'ಪಕ್ಷ ಅಥವಾ ಸರಕಾರದ ಮಟ್ಟದಲ್ಲಿ ಶೀಘ್ರವೇ ಜವಾಬ್ದಾರಿಯುತ ಅಧಿಕಾರವಹಿಸಿಕೊಳ್ಳುವೆ' ಎಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಘೋಷಿಸಿದ್ದಾರೆ. ಇದರೊಂದಿಗೆ ಗಾಂಧಿ ಕುಡಿ ರಾಹುಲ್ ಕಾಂಗ್ರೆಸ್ ಪಕ್ಷ ಅಥವಾ ಯುಪಿಎ ಸರಕಾರದಲ್ಲಿ ಸೂಕ್ತ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಎದ್ದಿದ್ದ ಭಾರಿ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗಳು ಮುಗಿಯುತ್ತಿದ್ದಂತೆ (ಸೆಪ್ಟೆಂಬರಿನಲ್ಲಿ) ರಾಹುಲ್ ಗಾಂಧಿ ಅವರು ಪಕ್ಷ/ ಸರಕಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಪಜಕ್ಷದ ವಕ್ತಾರ ದಿಗ್ವಿಜಯ್ ಸಿಂಗ್ ಇತ್ತೀಚೆಗೆ ಹೇಳಿದ್ದರು. ಇನ್ನು, ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರೂ 'ರಾಹುಲ್ ಅವರು ಅಗತ್ಯವಾಗಿ ಮತ್ತು ಅತ್ಯವಶ್ಯವಾಗಿ ಸರಕಾರದಲ್ಲಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಬೇಕು' ಎಂದು ಕಳೆದ ವಾರವಷ್ಟೇ ಹೇಳಿದ್ದರು.
ಇದರಿಂದ, ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿ ಇನ್ನೂ ಸುಮಾರು 2 ವರ್ಷಗಳು ಇದ್ದು, ಅವರ ಸೇವಾವಧಿ ಈಗ ಡೋಲಾಯಮಾನವಾಗಿದೆ. ಅತಿ ಶೀಘ್ರದಲ್ಲೇ ರಾಹುಲ್ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹಗೊಂಡಿದ್ದಾರೆ. ಗಮನಾರ್ಹವೆಂದರೆ ಬುಧವಾರವಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷ/ಸರಕಾರದಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವ ನಿರ್ಧಾರ ರಾಹುಲ್ ಗೆ ಬಿಟ್ಟ ವಿಷಯ ಎಂದಿದ್ದರು.
ಆಡಳಿತ ವಿರೋಧಿ ಅಲೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೂ ಮುನ್ನವೇ ರಾಹುಲ್ ಗಾಂಧಿ ಅವರು ಪ್ರಧಾನಿ ಪಟ್ಟಕ್ಕೆ ಏರಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications