ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಬಾಣದ ನಂತರ ಗೋಪಾಲಕೃಷ್ಣನ ರಾಮಬಾಣ

By Srinath
|
Google Oneindia Kannada News

bjp-sadananda-gowda-dissidence-meet-july-19
ಬೆಂಗಳೂರು, ಜುಲೈ 18: ಕರ್ನಾಟಕ ಬಿಜೆಪಿ ಪಕ್ಷದಲ್ಲಿನ ಪುರಾತನ ಬಂಡಾಯಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಅಳಿಲು ಕಾಣಿಕೆ ಸಲ್ಲಿಸಲು ನಾಳೆ ಗುರುವಾರ ಮಹೂರ್ತ ನಿಗದಿಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಸುಮಾರು 50 ಶಾಸಕರ ಪೌರೋಹಿತ್ಯವೂ ಲಭಿಸಲಿದೆಯಂತೆ. ಒಟ್ಟಿನಲ್ಲಿ ಅರೆನೊಇದ್ರೆಯಲ್ಲಿದ್ದ ಮಗುವನ್ನು ಎಬ್ಬಿಸಿದಾಗ ಅದು ರಚ್ಚೆ ಹಿಡಿಯುವಂತೆ ಅಧಿಕಾರ ಕಳೆದುಕೊಂಡ ರಾಜಕೀಯ ಮಂದಿ ಬೀದಿರಂಪಾಟ ನಡೆಸುವುದು ಹೆಚ್ಚಾಗುತ್ತಿದೆ. ಅದಕ್ಕೆ ಯಡಿಯೂರಪ್ಪ, ಸದಾನಂದ ಎಂಬ ಭೇದ ಭಾವವಿರದು.

ತಾವು ಮಂಡಿಸಿದ್ದ ಬಜೆಟ್ ಗೆ ಅನುಮೋದನೆ ಒಡೆಯುವ ಸಲುವಾಗಿ ಕರೆದಿರುವ ಮಹತ್ವದ ಅಧಿವೇಶನದ ವೇಳೆಯೇ ಭಿನ್ನಮತಕ್ಕೆ ಸದಾನಂದರು ನೀರೆರೆಯುವುದು ಕುತೂಹಲಕಾರಿಯಾಗಿದೆ. ನಾಳೆ ತಮ್ಮ ಬಣದ 50 ಶಾಸಕರೊಂದಿಗೆ ನಡೆಸಲಿರುವ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಲಕ್ಷಣಗಳಿವೆ. ಮುಖ್ಯವಾಗಿ ಭಿನ್ನಮತ ಪೋಷಿಸುತ್ತಾ, ಭವಿಷ್ಯದಲ್ಲಿ ತಮ್ಮ ಬಣದ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ ಎಂಬ ಬಗ್ಗೆ ಈ ಸಭೆ ನಿರ್ಧರಿಸಲಿದೆ.

ಈ ತಕ್ಷಣಕ್ಕೆ ತಮ್ಮ ಬಣದ ಸಚಿವ/ಶಾಸಕರಿಗೆ ಪ್ರಾಮುಖ್ಯತೆಯಿರುವ ಖಾತೆಗಳನ್ನು ದಕ್ಕಿಸಿಕೊಳ್ಳುವುದು ಹೇಗೆ, ಚುನಾವಣೆ ಸಮೀಪಿದಲ್ಲಿರುವಾಗ ಒಂದಷ್ಟು ಜನಸೇವೆ ಮಾಡಲು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿಕೊಳ್ಳುವುದು ಹೇಗೆ ಮತ್ತು ಅಧಿವೇಶನದಲ್ಲಿ ತಮ್ಮ ಬಣದ ಪಾಲ್ಗೊಳ್ಳುವಿಕೆ ಬಗ್ಗೆ ಸಭೆಯಲ್ಲಿ ಸದಾನಂದರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಖುದ್ದಾಗಿ ತಾವೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಆಸೀನರಾಗುವುದು ಅಥವಾ ತಾವು ಸೂಚಿಸುವವರನ್ನೇ ಪ್ರತಿಷ್ಠಾಪಿಸುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ/ಬಣದವರಿಗೆ ಅವಕಾಶ ತಪ್ಪಿಸಿ ಮೇಲುಗೈ ಸಾಧಿಸುವುದು ಹೇಗೆ ಎಂಬುದರ ಬಗ್ಗೆಯೂ ಸದಾನಂದರು ತಮ್ಮ ಬಣದವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕಾಮಬಾಣದ ನಂತರ ಬೇಳೂರು ರಾಮಬಾಣ: ಕಳೆದ ವಾರ ತಮ್ಮದೇ ಜಿಲ್ಲೆಯತ್ತ ಕಾಮಬಾಣ ಬಿಟ್ಟಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಈಗ 'ರಾಮ'ಬಾಣ ಬಿಟ್ಟಿದ್ದಾರೆ. ಅಂದರೆ ಸಚಿವ ರಾಮದಾಸ್ ವಿರುದ್ಧ ವಾಗ್ಬಾಣ ಹಿರಿದಿದ್ದಾರೆ.

'ರಾಮದಾಸ್‌ಗೆ ಮಾನ-ಮರ್ಯಾದೆ ಇಲ್ಲ. ಆತ ಯಾರ ಚೇಲಾ ಅಂತ ನನ್ಗೊತ್ತು ಗೊತ್ತು. ಅವನು ಸಚಿವನಾಗಲಿಕ್ಕೆ ನಾವೇ ಕಾರಣ. ಅವನಿಂದ ನಾವು ಪಾಠ ಕಲಿಯಬೇಕಾಗಿಲ್ಲ' ಎಂದು ತಮ್ಮ ಬತ್ತಳಿಕೆಯಲ್ಲಿ ಬಂಡಾಯದ ಬಾಣ ಇಟ್ಟುಕೊಂಡೇ ಇರುವ ಗೋಪಾಲಕೃಷ್ಣ ಅವರು ಏಕವಚನದಲ್ಲೇ ರಾಮದಾಸ್ ಗೆ ಬಹುಮತಿ ನೀಡಿದ್ದಾರೆ.

ಅಂದಹಾಗೆ ಸಚಿವ ಸ್ಥಾನ ವಂಚಿತ ಒಂದಷ್ಟು ಶಾಸಕರು, ಗೋಪಾಲಕೃಷ್ಣರ ಜತೆಗೂಡಿ ಶಾಸಕ ಕರುಣಾಕರ ರೆಡ್ಡಿ ನಿವಾಸದಲ್ಲಿ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜತೆಗೆ ಜುಲೈ 25 ರಂದು ಎಲ್ಲರ ಬಂಡವಾಳವೂ ಬಹಿರಂಗವಾಗಲಿದೆ ಎಂಬ ಪಟಾಕಿಯನ್ನೂ ಸಿಡಿಸಿದ್ದಾರೆ.

ಇಷ್ಟಕ್ಕೂ ಶಾಸಕ ಗೋಪಾಲಕೃಷ್ಣ ಹೀಗೆ ತಮ್ಮ ವಾಗ್ಬಾಣವನ್ನು ರಾಮದಾಸ್ ವಿರುದ್ಧ ಬಿಟ್ಟಿದ್ದಾದರೂ ಏಕಪಾ ಅಂದರೆ ಬೇಳೂರು ಗ್ಯಾಂಗಿನ ಭಿನ್ನ ಚಟುವಟಿಕೆ ಬಗ್ಗೆ ರೋಸಿಹೋದ ರಾಮದಾಸರು, ತಮ್ಮ ಸ್ವಕ್ಷೇತ್ರ ಮೈಸೂರಿನಲ್ಲಿ ಆ ಗ್ಯಾಂಗನ್ನು ತರಾಟೆಗೆ ತೆಗೆದುಕೊಂಡಿದ್ದರು. 'ಭಿನ್ನಮತ ಚಟುವಟಿಕೆ ನಡೆಸುವ ಅತೃಪ್ತ ಶಾಸಕರು ಈ ಮೊದಲು ಅನರ್ಹಗೊಂಡ ಘಟನೆಯಿಂದ ಪಾಠ ಕಲಿಯಬೇಕು' ಎಂದು ಹೇಳಿದ್ದರು.

ರಾಮದಾಸರು ಅಷ್ಟು ಅಂದಿದ್ದೇ ತಡ ದಿಡಿಗ್ಗನೆ ಎದ್ದು ಕುಳಿತ ಶಾಸಕ ಗೋಪಾಲಕೃಷ್ಣ ಭರಪೂರ್ ರಾಮಬಾಣ ಬಿಟ್ಟಿದ್ದಾರೆ. 'ಬಿಜೆಪಿಯಲ್ಲಿ ಭಿನ್ನಮತ ನಡೆಯಲು ಚಾಲನೆ ಕೊಟ್ಟವನೇ ರಾಮದಾಸ. ಈಗ ಆತ ತನಗೆ ಸಚಿವ ಸ್ಥಾನ ಸಿಕ್ಕಿದೆ ಅಂತ ನಮಗೆ ಪಾಠ ಹೇಳಲು ಬರಬಾರದು' ಎಂದೂ ಎಚ್ಚರಿಕೆ ಕೊಟ್ಟರು ಬೇಳೂರು.

English summary
Karnataka ex CM Sadananda Gowda is gearing up to revolt against BJP and in perticular Ex CM BS Yeddyurappa. Sadananda Gowda supporters are holding an all important meet on July 19 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X