ಕ್ಲಾಸ್ ಮೇಟಿಗೆ ಕಿರುಕುಳ: ಕೋಲಾರದ ಟೆಕ್ಕಿ ಬಂಧನ

Posted By:
Subscribe to Oneindia Kannada
harassement-kolar-dell-techie-keshav-murthy-held
ಬೆಂಗಳೂರು‌, ಜುಲೈ 16: ಮತ್ತೆ ಟೆಕ್ಕಿಗಳ ಬಗ್ಗೆಯೇ ಸುದ್ದಿ ಮಾಡಬೇಕಾಗಿದೆ. ತನ್ನೊಂದಿಗೆ ಪ್ರೇಮಕ್ಕೆ ಸಹಕರಿಸಲಿಲ್ಲವೆಂದು ಸಹಪಾಠಿಯನ್ನು ಗೋಳುಹೊಯ್ದುಕೊಂಡ ಕೋಲಾರ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ವೀಕೆಂಡ್ ಮೋಜಿಗಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಗೆಳೆಯರ ಜತೆ ಟ್ರೆಕ್ಕಿಂಗ್ ಗೆ ಹೋಗಿದ್ದ ಸಾತ್ವಿಕ್ ಶಾಸ್ತ್ರಿ ಇನ್ನೂ ಪತ್ತೆಯಾಗಿಲ್ಲ. ಸಾತ್ವಿಕ್ ಗಾಗಿ ಸಮರೋಪಾದಿಯಲ್ಲಿ ಹುಡುಕಾಟ ಜಾರಿಯಲ್ಲಿದೆ.

26 ವರ್ಷದ ಜಿ. ಕೇಶವ ಮೂರ್ತಿ ಆಪಾದಿತ. ಈತ ದೊಮ್ಮಲೂರಿನಲ್ಲಿ Dell ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಈತ ನಾಲ್ಕು ವರ್ಷಗಳಿಂದ ನಿರಂತರವಾಗಿ ತನ್ನ ಮಾಜಿ ಸಹಪಾಠಿಗೆ ಕಿರುಕುಳ ನೀಡಿದ್ದಾನೆ.

2007ರ ಆ ದಿನಗಳು: 2008ರಲ್ಲಿ ಸಹಪಾಠಿ ಶಶಿಕಲಾ ಮುಂದೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡ ಟೆಕ್ಕಿ ಕೇಶವ ಮೂರ್ತಿಗೆ ನಿರಾಶೆ ಕಾದಿತ್ತು. ಅದಕ್ಕೂ ಮುನ್ನ, ಕೋಲಾರದ ಇವರಿಬ್ಬರೂ ಬೆಂಗಳೂರಿನ ಕೆಆರ್ ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಹಾಗಾಗಿ, ಒಂದೇ ಬಸ್ಸಿನಲ್ಲಿ ಊರಿಂದ ಕಾಲೇಜಿಗೆ ಬಂದು ಹೋಗುತ್ತಿದ್ದ ಸಹಪಾಠಿಯ ಮೇಲೆ ಕೇಶವ ಮೂರ್ತಿಗೆ ಪ್ರೇಮಾಂಕುರವಾಗಿದೆ. ಸಹ ಪ್ರಯಾಣದ ಮಧ್ಯೆ ಒಮ್ಮೆ ಕೇಶವ ಮೂರ್ತಿ ತನ್ನ ಬಾಳ ಪಯಣಿಗಳೂ ಆಗು ಎಂದು ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಆದರೆ ಅದು ಏಕಮುಖ ಸಂಚಾರವಾಗಿದೆ.

ಸರಿ ಅಲ್ಲಿಂದ ದಿಕ್ಕುತಪ್ಪಿದವನಂತಾದ ಕೇಶವ ಮೂರ್ತಿ ಒಂದೇ ಸಮನೆ ಹುಡುಗಿಯನ್ನು ಗೋಳುಹೊಯ್ದುಕೊಂಡಿದ್ದಾನೆ. ಮೊಬೈಲ್ ಫೋನಿನಲ್ಲಿ ಅಶ್ಲೀಲ ಸಂದೇಶಗಳನ್ನು ರವಾನೆ, ಇಮೇಲು ಅದೂ ಇದೂ ಅಂತ ಸಾಮಾಜಿಕ ತಾಣಗಳಲ್ಲಿ ಇಂತಹುದೇ ಅಶ್ಲೀಲ ಸಂದೇಶಗಳನ್ನು ವಾಡಿಕೆಯಂತೆ ಕಳಿಸತೊಡಗಿದ.

ಕೇಶವನ ಲೀಲೆಗಳಿಂದ ಬೇಸತ್ತು 2011ರ ಏಪ್ರಿಲ್ ನಲ್ಲಿ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪೊಲೀಸರು ಕೇಶವನಿಗೆ ಕಟ್ಟೆಚ್ಚರಿಕೆ ಕೊಟ್ಟು ಕಳಿಸಿದ್ದರು. ಅದಕ್ಕೂ ಮುನ್ನ ಮುಳಬಾಗಿಲು ಪೊಲೀಸ್ ಠಾಣೆಯಲ್ಲೂ ಕೇಶವನ ವಿರುದ್ಧ ದೂರು ದಾಖಲಿಸಲಾಗಿತ್ತು. ಅಲ್ಲೂ ಅಷ್ಟೇ ಪೊಲೀಸರು ಪಾಪ ನಮ್ಮ ಹುಡುಗ. ಅವನ ಭವಿಷ್ಯ ಹಾಳಾಗುತ್ತದೆ ಎಂದು ಸುಮ್ಮನೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಆದರೆ ಇವಯ್ಯ ಅದರಿಂದ ಮತ್ತಷ್ಟು ಉತ್ತೇಜಿತನಾದ. ಪೊಲೀಸರು ತನ್ನನ್ನು ಏನೂ ಮಾಡಲಾರರು ಎಂದು ತನ್ನಾಟ ಮುಂದುವರಿಸಿದ ಎಂದು ಇದೀಗ ಕೆಆರ್ ಪುರಂ ಪೊಲೀಸರು ಹೇಳುತ್ತಿದ್ದಾರೆ. ಸದರಿ ಯುವತಿಯ ಹೆಸರಿನಲ್ಲಿ FaceBook ಮತ್ತು Gmail ಕಾತೆಗಳನ್ನು ತೆರೆದ ಆರೋಪಿ ಕೇಶವ ತನ್ನ ಸಹಪಾಠಿಯ ಮುಖಕ್ಕೆ ಹೊಂದುವಂತೆ ಬೇರೊಂದು ನಗ್ನ ಯುವತಿಯ ಫೋಟೋ ಅಂಟಿಸಿ, ಆಕೆಯ ಪರಿಚಯಸ್ಥರಿಗೆಲ್ಲ ಕಳಿಸತೊಡಗಿದ.

ಕೊನೆಗೆ ಅದು ಬಾಧಿತ ಯುವತಿಯ ಸೋದರಿ ಮತ್ತು ಆಕೆಯ ಭಾವನಿಗೂ ಇಂತಹ ಚಿತ್ರ ಸಂದೇಶಗಳು ಬಂದವು. ತಕ್ಷಣ ಎಚ್ಚೆತ್ತ ಸಂಬಂಧಿಗಳು ಕಳೆದ ತಿಂಗಳು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಇದರ ಸುಳಿವು ಪಡೆದ ಆರೋಪಿ ಕೇಶವ 15 ದಿನ ಯಾರಿಗೂ ಕಾಣಿಸಿಕೊಳ್ಳಲಿಲ್ಲ. ಆದರೆ ನಾರಾಯಣಪುರದಲ್ಲಿ ಕೇಶವ ಬಚ್ಚಿಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ಶನಿವಾರ ಬೆಳಗ್ಗೆ ಆತನನ್ನು ವಶಕ್ಕೆ ತೆಗೆದುಕೊಂಡರು.

ಆರೋಪಿ ಕೇಶವನ ತಂದೆಯವರು ಈ ಹಿಂದೆಯೇ ಮೃತಪಟ್ಟಿದ್ದು, ತಾಯಿ ಕೋಲಾರದಲ್ಲಿ ವಾಸಿಸುತ್ತಿದ್ದಾರೆ. ಆರೋಪಿಗೆ ಇಬ್ಬರು ಅಕ್ಕಂದಿರಿದ್ದು, ಇಬ್ಬರೂ ವಿವಾಹವಾಗಿದ್ದಾರೆ. ಆತನ ಭಾವ ಲಕ್ಷ್ಮಯ್ಯ ಅವರು ಕೋಲಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದು, ಅವರಿಗೆ ಮಾಹಿತಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sexual Harassement : A 26-year-old software engineer (Dell techie) from Kolar Keshav Murthy held on July 14.
Please Wait while comments are loading...