ಯಾರು ಬಲಿಷ್ಠರು ನಿಮಗೆ ಈ ಇಬ್ಬರು ಹೈಕಮಾಂಡರ ನಡುವೆ?

Congress and BJP High Command
ಕಾಂಗ್ರೆಸ್ ಹೈಕಮಾಂಡ್ ಮತ್ತು ಬಿಜೆಪಿ ಹೈಕಮಾಂಡ್ ಎರಡನ್ನು ಬೇರೆ ಬೇರೆ ತುಕುಡಿಗೆ ಇಟ್ಟು ತೂಗಿದರೆ ವ್ಯತ್ಯಾಸ ನಾವು ಕಾಣಬಹುದಾಗಿರುವುದು ಅಜಗಜಾಂತರ. ಕಾಂಗ್ರೆಸ್ ಹೈಕಮಾಂಡ್ ಎನ್ನುವ ಪವರ್ಫುಲ್ ಹುದ್ದೆಯ ಮುಂದೆ ಬಿಜೆಪಿ ಹೈಕಮಾಂಡ್ ಕೊಂಚ ವೀಕ್ ಎನ್ನುವುದನ್ನು ಕೇಸರಿ ಪಕ್ಷದ ಕಟ್ಟಾ ಬೆಂಬಲಿಗರು ತುಸು ಕಷ್ಟವಾದರೂ ಒಪ್ಪಿಕೊಳ್ಳಬೇಕಾದ ಮಾತು.

ಅಸಹ್ಯ ಹುಟ್ಟಿಸುತ್ತಿರುವ ರಾಜ್ಯ ಬಿಜೆಪಿ ವಿದ್ಯಮಾನ, ಒಳಜಗಳ, ಅದಾದ ಕೂಡಲೇ ದೆಹಲಿ ವರಿಷ್ಟರಿಂದ ಸಂಧಾನಸೂತ್ರಕ್ಕೆ ರಾಯಭಾರಿ ಬೆಂಗಳೂರಿಗೆ ಬರುವುದು, ತಾತ್ಕಾಲಿಕ ಭಿನ್ನಮತ ಶಮನ, ಭಿನ್ನಮತ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿಕೆ, ನಾವೆಲ್ಲರೂ ಒಂದೇ ಎಂದು ಮಾಧ್ಯಮದ ಮುಂದೆ ಪೋಸ್ ಕೊಡುವುದು, ಅದಾದ ಕೆಲ ದಿನ/ತಿಂಗಳಲ್ಲಿ ಮತ್ತೆ ಭಿನ್ನಮತ ಮತ್ತೆ ದೆಹಲಿಯಿಂದ ರಾಯಭಾರಿ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಶಿಸ್ತಿನ ಪಕ್ಷದ ಸಿಪಾಯಿಗಳು ನಡೆದು ಕೊಳ್ಳುತ್ತಿರುವ ಅಶಿಸ್ತಿನ ವರ್ತನೆ.

ತಮ್ಮ ಬಣವನ್ನು (ಬಿಎಸ್ವ್ವೈ) ಅಸೆಂಬ್ಲಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ಆಸನ ವ್ಯವಸ್ಥೆ ಮಾಡಬೇಕೆನ್ನುವ ಮಟ್ಟಿಗೆ ಕುಲಗೆಟ್ಟು ಹೋಗಿರುವ ರಾಜ್ಯ ಬಿಜೆಪಿ ಆಂತರಿಕ ಕಿತ್ತಾಟಕ್ಕೆ ಪಕ್ಷದ ದೆಹಲಿಯವರು ಸೂಕ್ತ, ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿಲ್ಲಾಂದರೆ ಯಾವ ಜಾತಿ ಲೆಕ್ಕಾಚಾರವು ಮುಂಬರುವ ದಿನಗಳಲ್ಲಿ ಬಿಜೆಪಿಗೆ ವರ್ಕ್ ಔಟ್ ಆಗುವುದಿಲ್ಲ ಎನ್ನುವ ಸತ್ಯವನ್ನು ದೆಹಲಿ ಬಿಜೆಪಿ ದೊರೆಗಳು ಇನ್ನೂ ಅರ್ಥ ಮಾಡಿಕೊಳ್ಳದೇ ಇರುವುದು ವಿಪರ್ಯಾಸ.

ಬಿಎಸ್ಆರ್ ಶ್ರೀರಾಮುಲು ಅವರನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರು, ಸಂಸದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುವುದು ದೂರದ ಮಾತು ಅದರ ಬಗ್ಗೆ ಯೋಚಿಸದೆ ಇರುವುದು ಬಿಜೆಪಿಯ ನಿಷ್ಕ್ರಿಯತೆ ಅಲ್ಲದೆ ಇನ್ನೇನು? ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಖುಲ್ಲಂ ಖುಲ್ಲಾ ಸವಾಲು ಹಾಕಿದರೂ ಬಿಜೆಪಿ ದೂಡ್ಡ ತಲೆಗಳು ಜಾಣ ಕಿವುಡು ತಂತ್ರಕ್ಕೆ ಮುಂದಾಗಿರುವುದು ಪಕ್ಷಕ್ಕಾದ ಅವಮಾನ ಎಂದು ಬಹಳಷ್ಟು ನಿಷ್ಠ ಬಿಜೆಪಿ ಬೆಂಬಲಿಗರ ಅಂಬೋಣ.

ಇದು ಬರೀ ಕರ್ನಾಟಕದ ಸಮಸ್ಯೆ ಅಲ್ಲ. ಅದು ಗುಜರಾತ್ ಇರಬಹುದು, ರಾಜಸ್ಥಾನ್ ಇರಬಹುದು ಅಥವಾ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿರಬಹುದು. ಲಂಗುಲಗಾಮಿಲ್ಲದೆ ಸಾಗುತ್ತಿರುವ ಪಕ್ಷದ ಅಶಿಸ್ತು ಮುಂಬರುವ ಲೋಕಸಭೆ ಚುನಾವಣೆ, ಇನ್ನೊಂದು ವರ್ಷದಲ್ಲಿ ನಡೆಯಲಿರುವ ಗುಜರಾತ್ ಮತ್ತು ಕರ್ನಾಟಕ ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರದೇ ಇರದು.

ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಎಷ್ಟು ನಿರಾಯಾಸವಾಗಿ ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿತು. ಮೈತ್ರಿಕೂಟದ ಕೆಲ ಪ್ರಮುಖ ಪಕ್ಷದ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ, ವಿರೋಧ ಮೈತ್ರಿಕೂಟದ ಕೆಲ ಪಕ್ಷವನ್ನು ತನ್ನತ್ತ ಸೆಳೆಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಕ್ಷರಸಃ ಯಶಸ್ವಿಯಾಯಿತು.

ಇತ್ತ ಬಿಜೆಪಿ ಮೈತ್ರಿಕೂಟದಲ್ಲಿ ಮತ್ತೆ ಗೊಂದಲ, ಅಂತಃಕಲಹ, ಇಲ್ಲಿ ಕೂಡಾ ನಾವು ನೋಡಬಹುದಾಗಿರುವುದು ಕೂಟವನ್ನು ಮುನ್ನಡೆಸುವ ಒಬ್ಬ ಸಮರ್ಥ ನಾಯಕನ ಕೊರತೆ. ಪ್ರಧಾನಿ ಅಭ್ಯರ್ಥಿಯನ್ನಾಗಿ ಯಾರನ್ನು ಬಿಂಬಿಸಬೇಕು ಎನ್ನುವ ವಿಚಾರದಲ್ಲಿ ಕೂಡಾ ಬಿಜೆಪಿ ಪಕ್ಷದೊಳಗೆ ಮತ್ತು NDA ಕೂಟದಲ್ಲಿ ಯಾವುದೇ ಸರ್ವಾನುಮತ ಆಯ್ಕೆ ಇಲ್ಲ. ಆಂಧ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದರೂ ಜಗನ್ ಅವರನ್ನು ಒಂದು ಮಟ್ಟಿಗೆ ನಿಯಂತ್ರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು.

ಇನ್ನೊಂದು ವಿಷಯ ನಾವು ಗಮನಿಸಬೇಕಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿ ರಾಷ್ಟ್ರೀಯವಾಗಿ ಮತ್ತು ಆಯಾಯ ರಾಜ್ಯಕ್ಕೆ ನೇಮಕಗೊಂಡ ವಕ್ತಾರರು ಮಾತ್ರ ಮಾಧ್ಯಮಕ್ಕೆ ಮಾತ್ರ ಹೇಳಿಕೆ ನೀಡುತ್ತಾರೆ. ಇತ್ತ ಬಿಜೆಪಿಯಲ್ಲಿ ವಕ್ತಾರರ ಜೊತೆ ತಾಲೂಕು ಪಂಚಾಯಿತಿ ಸದಸ್ಯರಿಂದ ಹಿಡಿದು ಎಲ್ಲರೂ ಮಾಧ್ಯಮಕ್ಕೆ ಹೇಳಿಕೆ ನೀಡುವುದು ನಾವೆಲ್ಲಾ ನೋಡುತ್ತಿರುವ ವಿಚಾರ. ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಎಐಡಿಎಂಕೆ, ಡಿಎಂಕೆ ಮುಂತಾದ ಪಕ್ಷಗಳ ಮುಖ್ಯಸ್ಥರು ತಮ್ಮ ತಮ್ಮ ಪಕ್ಷದ ಸದಸ್ಯರ ಮೇಲೆ ಇರುವ ಹಿಡಿತವನ್ನು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಯಾಕೆ ಹೊಂದಿಲ್ಲ.

ವಾಜಪೇಯಿ, ಆಡ್ವಾಣಿ ಸಕ್ರಿಯವಾಗಿ ತಮ್ಮನ್ನು ಪಕ್ಷಕ್ಕೆ ತೊಡಗಿಸಿಕೊಳ್ಳುತ್ತಿದ್ದ ಸಮಯದಲ್ಲಿ ಬಿಜೆಪಿ ಶಿಸ್ತಿನ ಪಕ್ಷವಾಗಿಯೇ ಇತ್ತು. ವಾಜಪೇಯಿ NDA ಕೂಟದ ಮುಖ್ಯಸ್ಥರಾಗಿದ್ದಾಗ ಬಿಜೆಪಿ ಶಿಸ್ತಿನ ಪಕ್ಷ ಎಂದು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ಸಿದ್ದಾಂತಕ್ಕೆ, RSS ಆದೇಶಕ್ಕೆ ಬೆಲೆ ಇಲ್ಲದಿರುವುದು ಪಕ್ಷದ ನಿಷ್ಟಾವಂತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತೂ ಕಷ್ಟವಾದರೂ ಒಪ್ಪಿಕೊಳ್ಳಬೇಕಾದ ಸತ್ಯ.

ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿಯುತ್ತಿರುವ ಬೇರು ಮಟ್ಟದ ಸದಸ್ಯನಿಂದ ಹಿಡಿದು, ಪ್ರಾಮಾಣಿಕತನದಿಂದ ಕೆಲಸ ಮಾಡಿ ತಮ್ಮ ಕ್ಷೇತ್ರಕ್ಕೆ ಒಂದಷ್ಟು ಒಳ್ಳೆ ಕೆಲಸ ಮಾಡೋಣ ಇಂದು ಬಯಸಿ ಆಯ್ಕೆಯಾಗಿರುವ ಶಾಸಕರ ಸ್ಥಿತಿ ಮಾತ್ರ ಇಂದಿನ ದಿನಕ್ಕೆ ಅಯೋಮಯ. ಇರುವ ಐದಾರು ಗುಂಪುಗಳಲ್ಲಿ ಯಾರ ಪರವಾಗಿ ನಿಲ್ಲುವುದು, ಯಾರ ಪರವಾಗಿ ನಿಂತರೆ ರಾಜಕೀಯವಾಗಿ ಏಳಿಗೆ ಕಾಣಬಹದು ಎಂದು ಲೆಕ್ಕಾಚಾರ ಹಾಕುತ್ತಾ ಅದು ಟ್ಯಾಲಿ ಆಗದೆ ತ್ರಿಶಂಕು ಪರಿಸ್ಥಿತಿ ಅನುಭವಿಸುತ್ತಿರುವ ಇಂತಹ ನಾಯಕರು/ ಸದಸ್ಯರುಗಳಿಗೆ ಬಿಜೆಪಿ ಹೈಕಮಾಂಡ್ ಏನು ಉತ್ತರ ನೀಡುತ್ತದೆ?

ಹೈಕಮಾಂಡ್ ಎನ್ನುವ ಪದಕ್ಕೆ ಬಿಜೆಪಿಯಲ್ಲಿ ಸದ್ಯಕ್ಕೆ ಬೆಲೆಯೇ ಇಲ್ಲದಂತಿರುವ ಇಂದಿನ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಮತ್ತೆ ಸಂಜೀವಿನಿಯಾಗುವಂತ ಒಬ್ಬ ನಾಯಕನ ಅವಶ್ಯಕತೆ ತುರ್ತಾಗಿ ಬೇಕಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಆದೇಶವನ್ನು ಶಿರಸಾ ಪಾಲಿಸುವ ಕಾಂಗ್ರೆಸ್ ಸದಸ್ಯರು ಒಂದು ಕಡೆ. ಹೀಗಿರುವಾಗ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಬಿಜೆಪಿ ಹೈಕಮಾಂಡ್ ತುಲನೆ ಮಾಡಲು ಸಾಧ್ಯವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+